ಮಂಗಳೂರು: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಧಾನ ಅರ್ಚಕರಾಗಿದ್ದ ಪೊಳಲಿ ನಾರಾಯಣ ಭಟ್ ಅವರು ವಿಧಿಶರಾಗಿದ್ದಾರೆ. 78 ವರ್ಷ ವಯಸ್ಸಿನ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾರಾಯಣ ಭಟ್ ಅವರು ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾಗಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಪೊಳಲಿ ದಿ.ಪದ್ಮನಾಭ ಭಟ್ ಅವರ ಪುತ್ರರಾಗಿರುವ ಇವರು ಅನುವಂಶೀಯವಾಗಿ ದೇವಾಲಯದ ಪೌರೋಹಿತ್ಯ ನೆರವೇರಿಸುತ್ತಿದ್ದರು. ಶ್ರೀ ಕ್ಷೇತ್ರ ಪೊಳಲಿಯಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ಅರ್ಚಕರಾಗಿ, ದೇಗುಲಕ್ಕೆ ಬರುವ ಭಕ್ತರಿಗೆ ಅವರ ಇಷ್ಟಾನುಸಾರ ಪೂಜಾ ಕೈಂಕರ್ಯದ ಮಾರ್ಗದರ್ಶನ ನೀಡುತ್ತಾ ಆಧ್ಯಾತ್ಮಿಕ ಪರಂಪರೆಯಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದರು.
ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ದೇವಾಲಯದ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟಿದ್ದ ನಾರಾಯಣ ಭಟ್ ರವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಗೂ ಬೆಂಬಲವಾಗಿ ನಿಂತಿದ್ದರು. ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡುತ್ತಾ ಜನಾನುರಾಗಿಯಾಗಿ ಗಮನಸೆಳೆಯುತ್ತಿದ್ದರು. ಯೋಗ ಶಿಕ್ಷಣದಲ್ಲೂ ಪಾಲ್ಗೊಂಡು ಯುವಜನರಿಗೆ ಸ್ಪೂರ್ತಿಯಾಗಿದ್ದರು.
ಸಹೋದರರು, ಸಹೋದರಿಯರು ಹಾಗೂ ಪತ್ನಿ, ಇಬ್ಬರು ಪುತ್ರರು , ಒರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅವರು ಆಗಲಿದ್ದಾರೆ.

























































