ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಉತ್ತರ ಅಥವಾ ಪುತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಗಳಿಗೆ ಬಿಜೆಪಿ ರಾಜ್ಯಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ತಮ್ಮದೇ ಶೈಲಿಯಲ್ಲಿ ಗುದ್ದು ಕೊಟ್ಟಿದ್ದಾರೆ. ಈ ರೀತಿಯ ಸಾಧ್ಯಾ-ಸಾಧ್ಯತೆಗಳನ್ನು ತಳ್ಳಿ ಹಾಕಿರುವ ಅವರು, ಈ ಸುದ್ದಿ ಸುಳ್ಳು ಎನ್ನುವ ಮೂಲಕ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಮಾಧ್ಯಮ ಸಂದರ್ಶನದಲ್ಲಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿರುವ ನಳಿನ್ ಕುಮಾರ್ ಕಟೀಲ್, ‘ಶಾಸಕನಾಗಬೇಕು, ಸಚಿವನಾಗಬೇಕು, ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗೆಗಿನ ಅಂತೆ-ಕಂತೆಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯನ್ನೂ ಹೊಂದಿಲ್ಲ ಎಂದಿದ್ದಾರೆ. ‘ನಾನು ಎಂಎಲ್‌ಸಿ ಆಗಬೇಕೆಂದಾಗಲೀ, ಸಚಿವನಾಗಬೇಕೆಂದಾಗಲೀ ಆಸೆ ಇಟ್ಟುಕೊಂಡಿಲ್ಲ. ಮುಖ್ಯಮಂತ್ರಿಯಾಗುವ ಕನಸನ್ನೂ ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೆಷ್ಟು ದಿನ ರಾಜ್ಯಾಧ್ಯಕ್ಷ..?
‘ನಾನು ಸಂಸದನಾಗಬೇಕೆಂದುವ ಕೇಳಿಕೊಂಡಿರಲಿಲ್ಲ. ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಸಂಘದ ಹಿರಿಯರು, ಬಿಜೆಪಿಯ ನಾಯಕರ ಅಪೇಕ್ಷೆಯಂತೆ ನಾನು ಎಂಪಿ ಸ್ಥಾನಕ್ಕೆ ಸ್ಪರ್ದಿಸಿದ್ದೇನೆ. ಅದರಂತೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನೂ ಪಕ್ಷದ ವರಿಷ್ಠರು ನೀಡಿದ್ದಾರೆ. ಪ್ರಾಮಾಣಿಕವಾಗಿ ಜವಾಬ್ದಾರಿ ಮುಗಿಸಿದ ನಂತರ ನಾನು ನನ್ನ ಕೆಲಸ ಮಾಡುತ್ತೇನೆ’ ಎಂದವರು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ..!
ಈ ಹಿಂದೆಯೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಇಚ್ಚಿಸಿರಲಿಲ್ಲ. ಸಂಘದ, ಪಕ್ಷದ ಹಿರಿಯರ ಅಪೇಕ್ಷೆಯಂತೆ ಸ್ಪರ್ಧಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಬೇಕೆಂಬ ಆಸೆಯೂ ಇಲ್ಲ’ ಎಂದಿರುವ ಸಂಸದ ನಳಿನ್ ಕುಮಾರ್ ಕಟೀಲ್, ‘ನಾನೊಬ್ಬ ಕಾರ್ಯಕರ್ತನಾಗಿ ಬಂದವನು, ಕಾರ್ಯಕರ್ತನಾಗಿ ದೇಶದ ಕಾರ್ಯ ಮಾಡಲು ಇರುವವನು. ಆರೆಸ್ಸೆಸ್ ನಾಯಕರು, ಪಕ್ಷದ ಮುಖಂಡರು ಏನು ಹೇಳುತ್ತಾರೋ ಅದನ್ನು ಕಾಯಾ-ವಾಚಾ-ಮನಸಾ ನಡೆಸುತ್ತೇನೆ’ ಎಂದು ಹೇಳಿದ್ದಾರೆ.