ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಸ್ಸುಗಳ ಸೇರ್ಪಡೆಯಾಗಿವೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಜಯಪುರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಈ ನೂತನ ಬಸುವುಗಳ ಸೇವೆಯನ್ನು ಅಧಿಕೃತಗೊಳಿಸಿದರು.
ವಿಜಯಪುರದಲ್ಲಿ 112 ನಗರ ಸಾರಿಗೆ ವಾಹನಗಳಿಗೆ ಚಾಲನೆ ನೀಡಲಾಯಿತು. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆಗೆ 400 ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ ಎಂದವರು ತಿಳಿಸಿದರು.
ಶನಿವಾರ ಚಾಲನೆ ನೀಡಲಾದ ಒಟ್ಟು 112 ನೂತನ ನಗರ ಸಾರಿಗೆ ಬಸ್ ಗಳನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ, (Directorate of Urban Land Transport (DULT)) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯೋಜನೆ ಯಡಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ವಾಹನಗಳನ್ನು ವಿಜಯಪುರ ವಿಭಾಗಕ್ಕೆ 27, ವಿಜಯನಗರಕ್ಕೆ 25, ಕಲಬುರಗಿಗೆ 25, ರಾಯಚೂರಿಗೆ 18, ಬಳ್ಳಾರಿಗೆ 10, ಬೀದರಕ್ಕೆ 04 ಮತ್ತು ಯಾದಗಿರಿಗೆ 03 ಹಂಚಿಕೆ ಮಾಡಲಾಗಿದೆ.
ಇದೇ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲಿರುವ 30 ಬಸ್ ಗಳನ್ನು ಅವಶ್ಯವಿರುವ ವಿಭಾಗ/ಘಟಕಕ್ಕೆ ಮಾನ್ಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕಕರಸಾ ನಿಗಮ ರವರು ತೀರ್ಮಾನಿಸಿ ನಿಯೋಜಿಸಲು ಸಾರಿಗೆ ಸಚಿವರು ನಿಗಮಕ್ಕೆ ಸೂಚನೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ 56 ಪ್ರತಿಷ್ಠಿತ ವಾಹನಗಳ ಸೇರ್ಪಡೆ ಮಾಡಲಾಗುತ್ತಿದ್ದು, ಕಾರ್ಯಾದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸದಾಗಿ 56 ಪ್ರತಿಷ್ಠಿತ ಬಸ್ ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಅದರಲ್ಲಿ, 20 ಎಸಿ ಸ್ಲೀಪರ್, 20 ನಾನ್ ಎಸಿ ಸ್ಲೀಪರ್ ಮತ್ತು 16 ಎಸಿ ಸೀಟರ್ ವಾಹನಗಳಾಗಿರುತ್ತದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕ.ಕ.ರ.ಸಾ. ನಿಗಮಕ್ಕೆ ಹೊಸದಾಗಿ ಸೇರ್ಪಡೆಯಾಗಲಿರುವ 225 ವಿದ್ಯುತ್ ಚಾಲಿತ ವಾಹನಗಳನ್ನು ಸೇರಿಸಲಾಗುತ್ತಿದ್ದು, ಕಲಬುರ್ಗಿ ಜಿಲ್ಲೆಗೆ 100, ವಿಜಯಪುರ ಜಿಲ್ಲೆಗೆ 75 ಮತ್ತು 50 ಬಸ್ಸುಗಳನ್ನು ಬಳ್ಳಾರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಸಚಿವರಾದ ಎಂ.ಬಿ ಪಾಟೀಲ್, ಶಾಸಕರಾದ ಬಸನಗೌಡ ಆರ್. ಪಾಟೀಲ್ ಯತ್ನಾಳ್, ಕಟಕದೊಂಡ ವಿಠ್ಠಲ, ಕಕರಸಾ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಎಂ.ವೈ. ಪಾಟೀಲ, ಕಕರಸಾ ನಿಗಮ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಶೀಲ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



















































