ಮಂಗಳೂರು: ಅಯೋಧ್ಯೆಯ ಶ್ರೀರಾಮಚಂದ್ರ ಎಲ್ಲರಿಗೂ ಅಚ್ಚುಮೆಚ್ಚು. ಆಸ್ತಿಕರಿಗೆ ಶ್ರೀರಾಮನು ದೇವರಾದರೆ, ನಾಸ್ತಿಕರಿಗೂ ಆತ ಆದರ್ಶ ಪುರುಷ. ಹಾಗಾಗಿಯೇ ‘ಮರ್ಯಾದಾ ಪುರುಷೋತ್ತಮ’ ಎಂಬ ಪದವನ್ನು ಯಾರು ಕೂಡಾ ಅಲ್ಲಗಳೆಯಲಾರರು. ಅದೇ ರೀತಿ ‘ಶ್ರೀ ರಾಮೋತ್ಸವ’ವನ್ನೂ ಆಸ್ತಿಕರು ಮರೆಯಲಾರರು.

ಇಂತಹಾ ರೂಪಕವೊಂದು ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ. ಮಂಗಳೂರು ಸಮೀಪದ ಮೂಡಬಿದಿರೆ ಬಂಟರ ಸಂಘದ ಕಲಾವಿದರು ನಾಡಿನ ವಿವಿಧೆಡೆ ಶ್ರೀರಾಮ ಚರಿತೆಯನ್ನು ಪ್ರಸ್ತುತಪಡಿಸಿ ಗಮನಸೆಳೆದಿದ್ದಾರೆ. ಪ್ರದರ್ಶನ ನಡೆದಲ್ಲೆಲ್ಲಾ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಮಹಾವಿಷ್ಣುವಿನ ಅವತಾರಗಳನ್ನು ಸ್ಮರಿಸುವುದು ವಾಡಿಕೆ. ಪುರಾಣದಲ್ಲಿ ನರಕಾಸುರನನ್ನು ವಿಷ್ಣು ವಧಿಸಿದ ಸಂದರ್ಭವನ್ನು ನೆನೆದು ‘ನರಕ ಚತುರ್ಥಿ’ಯನ್ನು ಆಚರಿಸಲಾಗುತ್ತದೆ. ಬಲಿ ಚಕ್ರವರ್ತಿಯ ಅಹಂಕಾರವನ್ನೂ ಮುರಿಯಲು ವಿಷ್ಣು ವಾಮನರೂಪಿಯಾಗಿ ಅವತಾರ ತಾಳಿದ ಸನ್ನಿವೇಶವೂ ದೀಪಾವಳಿ ಹಬ್ಬದ ಕಥಾವಸ್ತು. ಅಷ್ಟೇ ಅಲ್ಲ, ಅಯೋಧ್ಯೆ ಶ್ರೀರಾಮನಿಗೂ ದೀಪಾವಳಿ ಹಬ್ಬಕ್ಕೂ ನಂಟು ಇದೆ. ಲಂಕಾಸುರನನ್ನು ಗೆದ್ದು ಬಂದ ಶ್ರೀರಾಮನನ್ನು ಸ್ವಾಗತಿಸುವ ಪರ್ವವೂ ಈ ದೀಪಾವಳಿ.
ಆದರೆ, ಪುರಾಣ ಕಾಲದ ದೀಪಾವಳಿಯು ಕಳೆದ 500 ವರ್ಷಗಳಲ್ಲಿ ಕಾಣಲಿಲ್ಲವಂತೆ. ಯಾಕೆಂದರೆ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಮೊಗಲರು ಧ್ವಂಸ ಮಾಡಿದ ನಂತರದಲ್ಲಿ ದೇಗುಲವಿಲ್ಲದ ಆಚರಣೆಯಿಂದ ಹಿಂದೂಗಳು ದೂರವಾಗಿದ್ದರು. ಆದರೆ ಈಗ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಹಾಗಾಗಿ ಈಗ ಗತಕಾಲದ ಸಂಭ್ರಮ ಮರುಕಳಿಸಿದೆ. ಈ ಸಂಭ್ರಮವನ್ನೂ ಮುಂದಿಟ್ಟು ತುಳುನಾಡಲ್ಲಿ ದೀಪಾವಳಿಯ ಮಹತ್ವ ಹೇಗಿದೆ ಎಂಬುದನ್ನು ಮೂಡಬಿದಿರೆಯ ಬಂಟರ ಸಂಘದ ಸದಸ್ಯರು ನೃತ್ಯ ರೂಪಕ ಮೂಲಕ ನಾಡಿಗೆ ಅನಾವರಣ ಮಾಡಿದ್ದಾರೆ.

ಈ ಕಲಾವಿದರು, ಮಹಾವಿಷ್ಣುವಿನ ಅವತಾರಗಳನ್ನು ‘ದೀಪಾವಳಿ’ ಸಡಗರದ ಸನ್ನಿವೇಶಗಳಿಗೆ ಥಳುಕುಹಾಕಿದ್ದಾರೆ. ವಿಷ್ಣು ಅವತಾರಗಳ ಮೂರೂ ಪ್ರಸಂಗಗಳ ಪೈಕಿ ಶ್ರೀರಾಮ ಮಂದಿರ ಬಗೆಗಿನ ರೂಪಕ ಕುತೂಹಲದ ಕೇಂದ್ರಬಿಂದುವಾಗಿದೆ. ರಾಮಮಂದಿರಕ್ಕಾಗಿ ನಡೆದ ಹೋರಾಟ, ಮಂದಿರ ನಿರ್ಮಾಣ ಸಡಗರ, ಕನ್ನಡಿಗ ಶಿಲ್ಪಿಯೇ ಬಾಲರಾಮನ ಮೂರ್ತಿ ಕೆತ್ತಿದ ವೈಖರಿ ಇತ್ಯಾದಿ ಹಂತಗಳನ್ನು ಮನೋಜ್ಞವಾಗಿ ನೃತ್ಯ ವೈಭವ ಮೂಲಕ ತೆರೆದಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಬಂಟರ ಸಂಘ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೂಡಬಿದಿರೆಯ ಬಂಟರ ಸಂಘದ ಸದಸ್ಯರು ‘ರಾಮೋತ್ಸವ ಕಥಾ ವೈಭವವನ್ನು’ ಅನಾವರಣ ಮಾಡಿ ಮೆಚ್ಚುಗೆಗೆ ಪಾತ್ರರಾದರು. ಬಂಟ್ವಾಳ, ಬೈಂದೂರು, ಮಂಗಳೂರು ಸೇರಿದಂತೆ ಹಲವೆಡೆ ಈ ಕಥಾ ಪ್ರಸಂಗಗಳನ್ನು ಪ್ರದರ್ಶಿಸಿದ್ದಾರೆ.
ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿಯ ನಿತಿನ್ ಕುಮಾರ್ ಅವರ ಕೊರಿಯೋಗ್ರಫಿಯಲ್ಲಿ ಮೂಡಬಿದಿರೆ ಬಂಟರ ಸಂಘದ ಕಲಾವಿದರ ಈ ಸಾಧನೆಯ ಹಿಂದಿನ ಸ್ಪೂರ್ತಿಯಾಗಿರುವವರು ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮೋಹನ್ ಆಳ್ವಾ. ಇವರ ಜೊತೆಯಲ್ಲೇ ಸದಾ ಸ್ಪೂರ್ತಿಯ ಸೆಳೆಯಾಗಿರುವವರು ಮೂಡಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟರು.
ಮೂಡಬಿದಿರೆ ಬಂಟರ ಸಂಘದ ಕಲಾವಿದರ ಈ ಸಾಧನೆ ಬಗ್ಗೆ ಕೊಂಡಾಡಿರುವ ಆಳ್ವಾಸ್ ವಿರಾಸತ್ ಖ್ಯಾತಿಯ ಡಾ.ಮೋಹನ್ ಆಳ್ವಾ, ಮೂಡಬಿದಿರೆ ಈಗ ಸಾಂಸ್ಕೃತಿಕ ನಾಗರಿಯಾಗಿ ಗಮನಸೆಳೆದಿದ್ದು, ಇಲ್ಲಿನ ಕಲಾವಿದರು ಎಲ್ಲೆಡೆ ಕಲಾ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಮೂಡಬಿದಿರೆಯ ಬಂಟ್ಸ್ ಸಂಘ ಕೂಡಾ ಪ್ರಾಮಾಣಿಕ ಪ್ರಯತ್ನ ಮಾಡಿ ಹೆಸರನ್ನು ಗಳಿಸಿದೆ ಎಂದು ಡಾ.ಆಳ್ವಾ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ತಂಡದ ಯಶಸ್ಸಿನ ಕುರಿತಂತೆ ಸಂತಸ ಹಂಚಿಕೊಂಡಿರುವ ಮೂಡಬಿದ್ರೆ ಬಂಟರ ಸಂಘದ ಮಹಿಳಾ ಘಟಕದ ಪದಾಧಿಕಾರಿ ಅಮೃತಾ ಹೆಗ್ದೆ, ‘ನಾವು ಸಮುದಾಯದೊಳಗಿನಿಂದಲೇ ಪ್ರತಿಭಾನ್ವಿತರನ್ನು ಆಯ್ಕೆ ಮಾಡಿದ್ದು, ಸುಮಾರು 25 ಮಂದಿಯ ನೃತ್ಯ ಬಳಗ ಸಹಿತ ಸುಮಾರು 25 ಮಂದಿ ಈ ಯಶೋಗಾಥೆಯಲ್ಲಿ ಸಾಥ್ ನೀಡುತ್ತಿದ್ದಾರೆ. ಶ್ರೀಕೃಷ್ಣ, ಶ್ರೀರಾಮ, ವಾಮನ ಹೀಗೆ ಪಾತ್ರಗಳಿಗೆ ಹೊಂದಿಕೊಳ್ಳುವ ನಟ-ನಟಿಯರ ಬಳಗದ ಪ್ರಯತ್ನವೂ ಶಹಬಾಸ್ ಗಿರಿ ಗಿಟ್ಟಿಸಿಕೊಂಡಿದೆ’ ಎಂದಿದ್ದಾರೆ.

ಮೂಡಬಿದಿರೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶಿವಪ್ರಸಾದ್ ಹೆಗ್ಡೆ ಈ ಯುವ ಸೈನ್ಯಕ್ಕೆ ಸ್ಫೂರ್ತಿಯಾಗಿದ್ದಾರೆ. ತಾನೂ ಕೂಡಾ ಈ ತಂಡದ ಜೊತೆ ಊರೂರು ತಿರುಗುತ್ತಾ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರ ಈ ಪ್ರಯತ್ನವನ್ನು ಕೊಂಡಾಡಿರುವ ಬೆಂಗಳೂರು ಬಂಟರ ಸಂಘ ಅಭಿನಂಧಿಸಿ ಗೌರವಿಸಿದೆ.























































ಮೂಡಬಿದಿರೆ ಬಂಟರ ಸಂಘದ ಕಲಾವಿದರ ಈ ಸಾಧನೆ ಬಗ್ಗೆ ಕೊಂಡಾಡಿರುವ ಆಳ್ವಾಸ್ ವಿರಾಸತ್ ಖ್ಯಾತಿಯ ಡಾ.ಮೋಹನ್ ಆಳ್ವಾ, ಮೂಡಬಿದಿರೆ ಈಗ ಸಾಂಸ್ಕೃತಿಕ ನಾಗರಿಯಾಗಿ ಗಮನಸೆಳೆದಿದ್ದು, ಇಲ್ಲಿನ ಕಲಾವಿದರು ಎಲ್ಲೆಡೆ ಕಲಾ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಮೂಡಬಿದಿರೆಯ ಬಂಟ್ಸ್ ಸಂಘ ಕೂಡಾ ಪ್ರಾಮಾಣಿಕ ಪ್ರಯತ್ನ ಮಾಡಿ ಹೆಸರನ್ನು ಗಳಿಸಿದೆ ಎಂದು ಡಾ.ಆಳ್ವಾ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.