ಬೆಂಗಳೂರು: ಮೇ 6, 7ರಂದು ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ ಅವರು, ಭಾನುವಾರ ಮಧ್ಯಾಹ್ನ ನೀಟ್ ಪರೀಕ್ಷೆ ಇರುವುದರಿಂದ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ವಿಶೇಷ ಕಳಕಳಿ ಹೊಂದಿರುವ ಪ್ರಧಾನಮಂತ್ರಿಯವರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲು ಸೂಚಿಸಿದ್ದಾರೆ. ಭಾನುವಾರ ಯಾವುದೇ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರೆ ಅಂತಹ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದರೆ, ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ಪೋಲಿಸರು ಬಿಡುತ್ತಾರೆ. ಈ ಕುರಿತಂತೆ ಪೊಲೀಸರೊಂದಿಗೆ, ಎಸ್‍ಪಿಜಿಯವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
Students first.
The NEET exam is crucial for many aspiring medical students, and PM Sri @narendramodi Ji understands this well.
His directive to ensure a hassle-free NEET exam for students in Bengaluru has resulted in a rescheduling of the roadshows.#ModiWinningKarnataka pic.twitter.com/CfxtrBsSqV
— Shobha Karandlaje (Modi Ka Parivar) (@ShobhaBJP) May 5, 2023
ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ?
ಶನಿವಾರದ ಪ್ರಧಾನಿ ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಅವರದೇ ಕಾರ್ಯಕರ್ತರ ಆ್ಯಂಬುಲೆನ್ಸ್‍ಗಳನ್ನು ರೋಡ್ ಶೋ ಮಾರ್ಗದಲ್ಲಿ ಓಡಿಸುವುದಾಗಿ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರೋಗಿಗಳಿರುವ ಆ್ಯಂಬುಲೆನ್ಸ್‍ಗಳನ್ನು ಪೊಲೀಸರು ಖುದ್ದು ಆಸ್ಪತ್ರೆಗಳವರೆಗೆ ಬಿಡುವಂತೆ ಮನವಿ ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಪ್ರಧಾನಮಂತ್ರಿಯವರು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್‍ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್ ವರೆಗೆ 26.5 ಕಿ.ಮೀ ರೋಡ್ ಶೋ ನಡೆಸುತ್ತಾರೆ. ನಾಡಿದ್ದು ಭಾನುವಾರ ಬೆಳಿಗ್ಗೆ 10ರಿಂದ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದ ವರೆಗೆ 8 ಕಿ.ಮೀ ರೋಡ್ ಶೋ ನಡೆಯಲಿದೆ ಎಂದು ವಿವರಿಸಿದರು.
ರಾಜಧಾನಿಯ ಎಲ್ಲರನ್ನೂ ನೋಡಬೇಕು, ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂಬ ಆಶಯದೊಂದಿಗೆ ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿಯವರು ಎರಡು ದಿನ ರೋಡ್ ಶೋ ನಡೆಸುತ್ತಿದ್ದಾರೆ. ಪ್ರಧಾನಿಯವರನ್ನು ಜನರು ಹೂ ಮಳೆಯೊಂದಿಗೆ ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.




















































