ಬೆಂಗಳೂರು: ಹಿಂಸೆಯನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ದೂರು ದಾಖಲಿಸಿ ತನಿಖೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ದೂರು ನೀಡಿದ್ದಾರೆ.
ಹಿಂಸೆಯನ್ನು ಉತ್ತೇಜಿಸುವ / ಹಿಂಸೆಗೆ ಪ್ರಚೋದಿಸುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಬಳಸಿರುವುದು ಕಾನೂನು ಬಾಹಿರವಾಗಿದ್ದು, BNS ಅಡಿಯಲ್ಲಿ ದಂಡನೀಯ. 06-02-2026 ರಂದು ಹಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಜಾಹೀರಾತಿನಲ್ಲಿ ಅಹಿಂಸೆಯ ಪ್ರತೀಕವಾಗಿರುವ, ರಾಷ್ಟ್ರಪಿತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಡುವ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಹಿಂಸಾತ್ಮಕ ಕೃತ್ಯಗಳು / ಹಿಂಸಾತ್ಮಕ ಸಂದೇಶಗಳು / ಹಿಂಸೆಗೆ ಪ್ರಚೋದಿಸುವ ವಿಷಯಗಳೊಂದಿಗೆ ತಪ್ಪಾಗಿ ಮತ್ತು ಅಜಾಗರೂಕತೆಯಿಂದ ಬಳಸಲಾಗಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ಈ ರೀತಿಯ ದುರುಪಯೋಗವು ಮಹಾತ್ಮ ಗಾಂಧೀಜಿಯವರ ಪರಂಪರೆಗೆ ದಕ್ಕೆ ಉಂಟುಮಾಡುವುದರ ಜೊತೆಗೆ ಸಾರ್ವಜನಿಕ ಭಾವನೆಗಳಿಗೆ ಆಘಾತ ಉಂಟುಮಾಡುತ್ತದೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇರುತ್ತದೆ ಎಂದವರು ಆರೋಪಿಸಿದ್ದಾರೆ.
ಈ ವಿಷಯವನ್ನು ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕವೂ ಹರಡಲಾಗಿದ್ದು, ಮಾಹಿತಿ ತಂತ್ರಜ್ಞಾನ ಅಧಿನಿಯಮ, 2000ರ ವಿಧಿಗಳೂ ಸಹ ಅನ್ವಯವಾಗುತ್ತವೆ. ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಅನಧಿಕೃತವಾಗಿ ಬಳಸಿರುವುದು Emblems and Names (Prevention of Improper Use) Act, 1950 ರ ಉಲ್ಲಂಘನೆಯೂ ಆಗಿರುತ್ತದೆ. ಮಹಾತ್ಮ ಗಾಂಧೀಜಿ ಶಾಂತಿ, ಅಹಿಂಸೆ ಮತ್ತು ಏಕತೆಯ ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ. ಅವರ ಭಾವಚಿತ್ರವನ್ನು ಹಿಂಸೆಯೊಂದಿಗೆ ಸಂಯೋಜಿಸುವ ಯಾವುದೇ ಪ್ರಯತ್ನವು ಅಪಾಯಕಾರಿ, ಕಾನೂನುಬಾಹಿರ ಹಾಗೂ ಭಾರತದ ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದ್ದು, ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದವರು ಪ್ರತಿಪಾದಿಸಿದ್ದಾರೆ.
ಕರ್ನಾಟಕದ ಭಾರತೀಯ ಜನತಾ ಪಕ್ಷದ ಮೇಲೆ ಭಾರತೀಯ ನ್ಯಾಯ ಸಂಹಿತೆ, 2023 ಅಡಿಯಲ್ಲಿ FIR ದಾಖಲಿಸಲು, ಸಂಬಂಧಿಸಿದ ಜಾಹೀರಾತು ವಿಷಯವನ್ನು ತಕ್ಷಣ ವಶಪಡಿಸಿಕೊಳ್ಳಲು , ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರುತ್ತೇನೆ. ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ರಾಷ್ಟ್ರೀಯ ಮಹಾಪುರುಷರ ಚಿತ್ರ ದುರುಪಯೋಗವಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಮೇಶ್ ಬಾಬು ಅವರು ಗೃಹ ಇಲಾಖೆಯನ್ನು ಆಗ್ರಹಿಸಿದ್ದಾರೆ.
























































