ಬೆಳಗಾವಿ: ಬಿಜೆಪಿ ಶಾಸಕ ಸಿ.ಟಿ.ರವಿ ಅವರನ್ನು ಬಂಧಿಸಿರುವ ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರೇನು ಕಾಂಗ್ರೆಸ್ ಏಜೆಂಟರಾ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಮುಂಭಾಗದಲ್ಲಿ ಜಮಾವಣೆಗೊಂಡು ಆಕ್ರೋಶ ಹೊರಹಾಕಿದರು. ಸಿ.ಟಿ.ರವಿ ಬಂಧನ ಖಂಡಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಸಿ.ಟಿ.ರವಿ ಅವರ ಭೇಟಿಗೆ ಅವಕಾಶ ಕೊಡುವಂತೆ ಬೆಂಬಲಿಗರು ಪೊಲೀಸರನ್ನು ಆಗ್ರಹಿಸಿದರು. ಆದರೆ ಪೊಲೀಸರು ಠಾಣೆಯ ಗೇಟ್ ತೆರೆಯಲು ನಿರಾಕರಿಸಿದರು.
ಅದೇ ಹೊತ್ತಿಗೆ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್ ಕೂಡಾ ಪೊಲೀಸ್ ಠಾಣೆಗೆ ಧಾವಿಸಿದರು. ಅವರನ್ನೂ ಠಾಣೆಯ ಒಳಗೆ ಬಿಡಲು ಪೊಲೀಸರು ನಿರಾಕರಿಸಿದಾಗ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರೇನು ಕಾಂಗ್ರೆಸ್ ಏಜೆಂಟರಾ ಎಂದು ಕಿಡಿಕಾರಿದರು.
ಇದೇ ಸಿ.ಟಿ.ರವಿ ಪರ ವಕೀಲ ಚೇತನ್ ಮನೇರಿಕರ್ ಅವರು ಠಾಣೆಗೆ ಆಗಮಿಸಿದ್ದು ಅವರಿಗೂ ಭೇಟಿ ಮಾಡಲು ಪೊಲೀಸರು ನಿರಾಕರಿಸಿದ ಪ್ರಸಂಗ ನಡೆಯಿತು. ಇದರಿಂದ ಕುಪಿತರಾದ ಅವರು ಆರೋಪಿಯನ್ನು ವಕೀಲರು ಭೇಟಿಯಾಗಬಹುದೆಂದು ಸುಪ್ರೀಂಕೋರ್ಟ್ ಗೈಡ್‌ಲೈನ್ಸ್ ಇದ್ದರೂ ಪೊಲೀಸರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ದೂರಿದರು.