ದಾವಣಗೆರೆ: ರೈತರಿಗೆ ಆತ್ಮ ಸ್ಥೈರ್ಯ ಕೊಡುವ ಉದ್ದೇಶದಿಂದ ಹಾಗೂ ಸಮಗ್ರ ಕೃಷಿ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ‘ರೈತರೊಂದಿಗೆ ಒಂದು ದಿನ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ದಾವಣಗೆರೆ ಜಿಲ್ಲೆ ಹೊನ್ನಳ್ಳಿಯಲ್ಲಿ ಮಂಗಳವಾರ ನಡೆದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ವಿಶೇಷತೆಗಳಿಂದ ಗಮನಸೆಳೆಯಿತು. ಹೊನ್ನಾಳಿ ತಾಲೂಕಿನ ಕಮ್ಮಾರಕಟ್ಟೆ ಗ್ರಾಮದಲ್ಲಿ ರೈತರೊಂದಿಗೆ ಹೊಲಗಳಲ್ಲಿ ಅನ್ನದಾತರಾಗಿ ಭಾಗವಹಿಸಿದ ಸಚಿವರಾದ ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಹಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೃಷಿಕ ವೃಂದಕ್ಕೆ ಶಕ್ತಿ ತುಂಬುವ ಪ್ರಯತ್ನಕ್ಕಿಳಿದರು.
ಹೊನ್ನಾಳಿ ತಾಲೂಕಿನ ಕಮ್ಮಾರಕಟ್ಟೆ ಗ್ರಾಮದ ಪ್ರಗತಿಪರ ರೈತ ಶ್ರೀನಿವಾಸ ಅವರ ತಾಕಿಗೆ ಭೇಟಿ ನೀಡಿ ಹೈಡ್ರೋಪೋನಿಕ್ಸ್ ವಿಧಾನದಲ್ಲಿ ಮುಸುಕಿನ ಜೋಳ, ಅಜೋಲ್ಲಾ ಬೆಳೆಗಳನ್ನು ಬೆಳೆದ ರೀತಿಯ ಬಗ್ಗೆ ಈ ಪ್ರಮುಖರು ವೀಕ್ಷಣೆ ಮಾಡಿ ಅನುಭವ ಪಡೆದರು.