ಮಂಡ್ಯ: ಸದಾ ಒಂದಿಲ್ಲೊಂದು ಸವಾಲು ಮೂಲಕ ಸುದ್ದಿಯ ಕೇಂದ್ರಬಿಂದುವಾಗುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್, ಇದೀಗ ಮನೆ ವಿಚಾರದಲ್ಲಿ ಬಿಜೆಪಿ ನಾಯಕರ ಮುಂದೆ ಸವಾಲು ಹಾಕಿದ್ದಾರೆ.
2017 ರಿಂದ 2019ರಲ್ಲಿ ಮಂಜೂರಾಗಿದ್ದ ಮನೆಗಳನ್ನು ನಂತರ ಅಧಿಕರಕ್ಕೆ ಬಂದ ಬಿಜೆಪಿ ಸರ್ಕಾರ ಯಾರಿಗೂ ಆ ಮನೆ ಕೊಟ್ಟಿಲ್ಲ ಎಂದು ಆರೋಪಿಸಿರುವ ಜಮೀರ್ ಅಹ್ಮದ್, ಒಂದು ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮನೆ ನೀಡಿರುವುದಾಗಿ ಹೇಳಿದರೆ ತಾನು ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ.
ವಸತಿ ಇಲಾಖೆ ಸಚಿವ ಜಮೀರ್ ಅಹ್ಮದ್ ಅವರು ಭಾನುವಾರ ಮಂಡ್ಯದಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸ್ಲಂ ಬೋರ್ಡ್ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿತ್ತು. ರಾಜೀವ್ ಗಾಂಧಿ ವಸತಿ ಯೋಜನೆಯಲ್ಲೂ ಸುಮಾರು 53 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಅನಂತರದ ಬಿಜೆಪಿ ಸರ್ಕಾರ ಒಂದು ಮನೆಯನ್ನು ಮಂಜೂರು ಮಾಡಿಲ್ಲ ಎಂದರು.
ಒಂದು ವೇಳೆ ಬಿಜೆಪಿಯವರು ಮನೆ ನೀಡಿರುವುದಾಗಿ ಹೇಳಿದರೆ ತಾನು ರಾಜಕೀಯ ನಿವೃತ್ತಿಯಾಗುವುದಾಗಿ ಜಮೀರ್ ಅಹ್ಮದ್ ಸವಾಲು ಹಾಕಿದರು.