ಬೆಂಗಳೂರು: ಪ್ರವಾಸೋದ್ಯಮ , ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ ಪಿ ಯೋಗೇಶ್ವರ ಅವರು ರಾಮನಗರದಲ್ಲಿ ಆದಿಚುಂಚನಗಿರಿ ಮಠಾಧೀಶ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು .
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನೆನ್ನೆ ಮೈಸೂರಿನಲ್ಲಿ ಜೆಎಸ್ಎಸ್ ಮಠಾಧೀಶರನ್ನು ಭೇಟಿ ಮಾಡಿದ್ದೇನೆ ಇಂದು ಚನ್ನಪಟ್ಟಣದಲ್ಲಿ ಇದ್ದ ಕಾರಣ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿದ್ದೇನೆ ಇನ್ನು ಮೂರ್ನಾಲ್ಕು ಮಠಾಧೀಶರನ್ನು ಭೇಟಿ ಮಾಡುತ್ತೇನೆ ಎಂದರು.
ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ನಾನು ಆಗಿಂದಾಗ್ಗೆ ಮಠಾಧೀಶರನ್ನು ಭೇಟಿ ಮಾಡುತ್ತಿರುತ್ತೇನೆ ಇದೀಗ ವಿಶೇಷ ಸಂದರ್ಭವಾಗಿದ್ದು ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು. ತಾವು ಬಿಜೆಪಿ ಪಕ್ಷದಲ್ಲಿದ್ದು ಪಕ್ಷದ ಚೌಕಟ್ಟಿನೊಳಗೆ ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು. ಮಾಧ್ಯಮದವರ ಎಲ್ಲಾ ಪ್ರಶ್ನೆಗಳಿಗೆ ಬಹಿರಂಗವಾಗಿ ಉತ್ತರ ಕೊಡಲು ಆಗುವುದಿಲ್ಲ ಎಂದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ದೊಡ್ಡ ಜವಾಬ್ದಾರಿ ತಮಗಿಲ್ಲ ಎಂದ ಅವರು ದಿನೇ ದಿನೇ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ ಎಂದರು. ಕೊರೋನ ಸೋಂಕನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು ಎಂದು ತಿಳಿಸಿದರು