ಬೆಂಗಳೂರು: ಭರ್ಜರಿ ರಾಜಕೀಯ ವಿದ್ಯಮಾನಗಳ ನಡುವೆ ಸಚಿವ ಶಿವಾನಂದ್ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ್) ರವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ. ತನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿರುವ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಶಿವಾನಂದ್ ಪಾಟೀಲ್ ತಿಳಿಸಿದ್ದಾರೆ.
ಯತ್ನಾಳ್ ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಬಸನಗೌಡ ಆರ್. ಪಾಟೀಲ್ (ಯತ್ನಾಳ್) ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ತಮ್ಮ ರಾಜೀನಾಮೆಯನ್ನೂ ಅಂಗೀಕರಿಸುವಂತೆ ಶಿವಾನಂದ್ ಪಾಟೀಲ್ ಅವರು ವಿಧಾನಸಭಾಧ್ಯಕ್ಷರಿಗೆ ಷರತ್ತು ವಿಧಿಸಿರುವುದು ಕುತೂಹಲಕಾರಿ ಸಂಗತಿಯಾಗಿದೆ.