ರಾಮನಗರ: ಮೇಕೆದಾಟು ಪಾದಯಾತ್ರೆ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್‌ಗೆ ತಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಇದೆ, ನಿಯಮ ಪಾಲನೆ ಮಾಡಿಲ್ಲ ಎಂದು ನಾನು ಸೇರಿದಂತೆ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ. ಹೀಗೆ ಕೇಸ್ ಹಾಕಿ ನಮ್ಮನ್ನು ಹೆದರಿಸಬಹುದು ಎಂದಕೊಂಡರೆ ಬಿಜೆಪಿಯವರಂತ ಮೂರ್ಖರು ಯಾರೂ ಇಲ್ಲ ಎಂದರು.
ಸಾವಿರಾರು ಜನ ಸೇರಿಸಿ ಪ್ರತಿಭಟನೆ ಮಾಡಿದ ಸುಭಾಷ್ ಗುತ್ತೇದಾರ ಅವರ ಮೇಲೆ ಕೇಸ್ ಹಾಕಿದ್ದೀರ ಬೊಮ್ಮಾಯಿ ಅವರೇ? ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಭಗವಂತ್ ಖೂಬಾ ಇವರೆಲ್ಲರ ಮೇಲೂ ಕೇಸ್ ಹಾಕಿದ್ದಾರಾ? ಗೃಹ ಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ದೊಡ್ಡ ಜಾತ್ರೆ ನಡೆಯಿತು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಸಿದ್ರು, ಇವೆಲ್ಲಾ ಮಾಡುವಾಗ ಕೊರೊನಾ ಮೂರನೇ ಅಲೆ ಇರಲಿಲ್ಲ, ನಮ್ಮ ಪಾದಯಾತ್ರೆ ಇಂದ ಮಾತ್ರ ಕೊರೊನ ಹರಡುತ್ತಾ? ಇದರಿಂದ ಸರ್ಕಾರದ ದುರುದ್ದೇಶ ಗೊತ್ತಾಗುತ್ತೆ ಎಂದವರು ಹೇಳಿದರು.
ನಾವು ಪಾದಯಾತ್ರೆ ಮಾಡಬಾರದು, ಜನ ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ಜಾಗೃತರಾಗಬಾರದು ಎಂಬುದು ಸರ್ಕಾರ ದುರುದ್ದೇಶ. ಬಿಜೆಪಿಯವರು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಬಲವರ್ಧನೆಗಾಗಿ ಕರ್ನಾಟಕದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದೇ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ, ಈ ಪಾದಯಾತ್ರೆ ವಿಷಯದಲ್ಲಿ ಯಾವ ಪ್ರತಿಷ್ಠೆಯಾಗಲೀ, ಒಣ ಜಂಭವಾಗಲೀ ಇಲ್ಲ. ರಾಜ್ಯದ ಹಿತಾಸಕ್ತಿ ಅಷ್ಟೇ ಇದೆ ಎಂದರು.
ಕೊರೊನಾ ಹರಡುತ್ತಿರೋದು ಬಿಜೆಪಿ ಅವರಿಂದಲೇ. ನಿನ್ನೆ ಮೊನ್ನೆವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ‌್ಯಾಲಿ ನಡೆಸಿದ್ದಾರೆ, ಅಲ್ಲೆಲ್ಲಾ ಕೊರೊನಾ ಇಲ್ವ? ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ ಕೊರೊನಾ ಬರಲ್ವಂತ? ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದ್ಯಾ? ನಮ್ಮ ಪಾದಯಾತ್ರೆ ತಡೆಯಲು ಬಿಜೆಪಿ ಹತಾಶ ಪ್ರಯತ್ನ ಮಾಡುತ್ತಿದೆ. ನಾವು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡುವಂತೆ ಹೇಳಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಒಂದು ಲಕ್ಷ ಮಾಸ್ಕ್ ಅನ್ನು ಪಾದಯಾತ್ರೆಗೆ ಬಂದವರಿಗಾಗಿ ಕೊಡುತ್ತಿದ್ದೇವೆ. ಸಾಮಾಜಿಕ ಅಂತರ ಕಾಪಾಡಲು ಗಮನ ನೀಡಿದ್ದೇವೆ. ಕೊರೊನಾ ರೋಗ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದ ಅವರು, ರೋಗ ಉಲ್ಬಣವಾದರೆ ಲಾಕ್ ಡೌನ್ ಮಾಡಬೇಕಾಗುತ್ತೆ ಎಂದು ಹೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಮಾಡಿರುವ ಲಾಕ್ ಡೌನ್ ನಿಂದ ಜನರ ಬದುಕು ಬೀದಿಗೆ ಬಂದಿದೆ, ಇನ್ನೂ ಅವರ ದುಡಿಮೆ ಸರಿ ದಾರಿಗೆ ಬಂದಿಲ್ಲ, ಹೀಗಿರುವಾಗ ಮತ್ತೆ ಲಾಕ್ ಡೌನ್ ಮಾಡುವುದು ದೊಡ್ಡ ತಪ್ಪು. ಒಂದು ವೇಳೆ ಲಾಕ್ ಡೌನ್ ಮಾಡಲೇಬೇಕು ಅಂತಾದರೆ ಕಾರ್ಮಿಕರು, ಕೂಲಿಕಾರರು, ನೇಕಾರರು, ಸವಿತಾ ಸಮಾಜದವರು, ಆಟೋ ಕ್ಯಾಬ್ ಚಾಲಕರು, ಬಡಗಿಗಳು, ಬೀದಿಬದಿ ವ್ಯಾಪಾರಿಗಳು ಹೀಗೆ ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಮೊದಲೇ ಪರಿಹಾರ ಧನ ನೀಡಿ, ಅವರ ಬದುಕಿಗೆ ರಕ್ಷಣೆ ಕೊಟ್ಟು ನಂತರ ಲಾಕ್ ಡೌನ್ ಮಾಡಬೇಕು. ಕಾರಣ ಮೊದಲ ಅಲೆಯಲ್ಲಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದ ಪರಿಹಾರದ ಹಣ ಇನ್ನು ಜನರಿಗೆ ಇನ್ನೂ ತಲುಪಿಲ್ಲ ಎಂದರು.
ನಿನ್ನೆ ಡಿ.ಕೆ ಶಿವಕುಮಾರ್ ಅವರ ಗಂಟಲು ದ್ರವ ಮಾದರಿ ತಗೊಂಡು ಬರಲು ಸರ್ಕಾರ ವೈದ್ಯಾಧಿಕಾರಿಯನ್ನು ಕಳುಹಿಸಿತ್ತು. ಬಹುಶಃ ಮಾದರಿ ಪರೀಕ್ಷೆ ಮಾಡಿ ಕೊರೊನಾ ಇದೆ ಎಂದು ಸುಳ್ಳು ವರದಿ ಕೊಡುವ ಯೋಚನೆ ಮಾಡಿಕೊಂಡಿದ್ದರೋ ಏನೋ. ಎರಡು ದಿನ ಬಿಸಿಲಿನಲ್ಲಿ ನಡೆದರೂ ಡಿ.ಕೆ ಶಿವಕುಮಾರ್ ಕಲ್ಲುಗುಂಡಿನ ಹಾಗೆ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹಿಂದೆ ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡಿದಾಗ ಕಡೇ ದಿನ ಐದು ಲಕ್ಷ ಜನ ಸೇರಿದ್ದರೂ. ಈಗಲೂ ಜನ ನಮ್ಮ ಪಾದಯಾತ್ರೆಗೆ ಸ್ವಯಂ ಪ್ರೇರಿತರಾಗಿ ಬರಲು ಆರಂಭ ಮಾಡಿದ್ದಾರೆ. ಇದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಬಳ್ಳಾರಿ ಪಾದಯಾತ್ರೆ ನೆನಪಾದ್ರೆ ಬಸವರಾಜ ಬೊಮ್ಮಾಯಿ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ ಇರಬೇಕು. ನಮ್ಮ ಪಾದಯಾತ್ರೆ ತಡೆಯಲು ಸತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ನಾವು ಅವರ ಯಾವ ಷಡ್ಯಂತ್ರಗಳಿಗೂ ಮಣಿಯದೆ ಹನ್ನೊಂದು ದಿನಗಳ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನಮ್ಮ ಮೇಲೆ ಸರ್ಕಾರ ಕಾನೂನಿನ ಹಾದಿಯಲ್ಲಿ ಕ್ರಮಕೈಗೊಳ್ಳಲು ಹೊರಟರೆ, ನಾವೂ ಕಾನೂನಿನ ರೀತಿಯಲ್ಲೇ ಉತ್ತರ ಕೊಡುತ್ತೇವೆ. ಏನೇನು ಕೇಸ್ ದಾಖಲಿಸುತ್ತಾರೋ ದಾಖಲಿಸಲಿ, ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದವರು ಹೇಳಿದರು.