📝 ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂಥ ನಾಯಕತ್ವವನ್ನು ಪಡೆದಿರವುದು ನಮ್ಮ ಭಾಗ್ಯ. ಈ ಮಾತುಗಳನ್ನು ಮೋದಿಯವರನ್ನು ಹೊಗಳಲು ಹೇಳುತ್ತಿಲ್ಲ, ಹೊಗಳಿಕೆಯ ಮಾತುಗಳು ಅವರಿಗೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಇಲ್ಲಿಯವರೆಗೆ ಹಲವಾರು ಬಾರಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ, ನೂರಾರು ಬಾರಿ ಅವರ ಭಾಷಣ ಕೇಳುವ ಅವಕಾಶ ಸಿಕ್ಕಿದ್ದರೂ ಭಾನುವಾರ ನನ್ನ ಬಾಳಿನ ಬಹು ಅಮೂಲ್ಯ ಕ್ಷಣ.
ಭಾನುವಾರ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹನ್ನೊಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಅನೌಪಚಾರಿಕ ಬೈಠಕ್ ಇತ್ತು. ಭೇಟಿಯಾಗುವಾಗ ತಾನು ನಾಲ್ಕು ಬಾರಿ ಮುಖ್ಯಮಂತ್ರಿಯಾದವನು ಎರಡು ಬಾರಿ ಪ್ರಧಾನಿ ಆಗಿರುವವನು ಎಂಬ ಹಮ್ಮು ಇರಲಿಲ್ಲ. ಅತ್ಯಂತ ಸಹಜವಾಗಿ ನಮ್ಮೆಲ್ಲರನ್ನೂ ಮಾತನಾಡಿಸುತ್ತಾ ಹೆಸರಿಡಿದು ಕರೆಯುತ್ತಾ ಉಭಯಕುಶಲೋಪರಿ ನಡೆಸಿದರು. ಎಲ್ಲರನ್ನೂ ಮಾತುಕತೆ ನಡೆಸುತ್ತಾ, ಎರಡು ದಿನದ ಚರ್ಚೆಗಳ ಕುರಿತಾಗಿ ಮಾತನಾಡಲು ನನ್ನನ್ನೇ ಮೊದಲು ಕರೆಯಬೇಕೆ!!!. ಕೊಂಚ ತಡವರಿಸುತ್ತಲೇ ಮಾತು ಆರಂಭಿಸಿದ ನನ್ನನ್ನು ಪ್ರೇರೇಪಿಸಿ, ಬಹಳಷ್ಟು ವಿಷಯಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡಿದರು.
ಅಂಗನವಾಡಿ ಮಕ್ಕಳ ಪೌಷ್ಟಿಕತೆಯ ವಿಚಾರದಿಂದ ಹಿಡಿದು ವಿವಿಧ ಅಂತರಾಷ್ಟ್ರೀಯ, ರಾಜತಾಂತ್ರಿಕ ವಿದ್ಯಮಾನಗಳ ವರೆಗೆ ಐದು ಗಂಟೆಗೂ ಹೆಚ್ಚುಕಾಲ ನಮ್ಮೊಂದಿಗೆ ಚರ್ಚಿಸಿದರು. ಪಂಚಾಯತ್ ಅಧ್ಯಕ್ಷರುಗಳನ್ನು ಮುಕ್ತವಾಗಿ ಮಾತನಾಡಿಸಲು ಕಷ್ಟವಿರುವ ಈ ಕಾಲದಲ್ಲಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ ನಮ್ಮ ಪ್ರಧಾನಮಂತ್ರಿಗಳು. ಮನ್ ಕಿ ಬಾತ್, ಪದ್ಮ ಪ್ರಶಸ್ತಿ, ಮಾಲ್ ನ್ಯೂಟ್ರಿಷನ್, ರೋಟಿ ಬ್ಯಾಂಕ್, ಬುಕ್ ಬ್ಯಾಂಕ್, ಸಮಾಜಕ್ಕೆ ಶಕ್ತಿ ತುಂಬುವುದು ಹೇಗೆ? ನಮ್ಮ ಪಕ್ಷ ಕೇವಲ ಚುನಾವಣೆಗೋಸ್ಕರ ಇಲ್ಲ, ಅದೊಂದು ಸಮಾಜ ಪರಿವರ್ತನೆಯ ಸಾಧನ ಎಂದು, ಎಲ್ಲರೂ ಪ್ರತಿನಿಧಿಸುವಂತೆ ಹೇಗೆ ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸಿದರು. ಬೇರೆಯವರಿಂದ ಒಳ್ಳೆಯದನ್ನು ಕಲಿಯಬಹುದಾ? ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಹೇಗೆ ಸಮರ್ಪಕವಾಗಿ ತಲುಪಿಸುವುದು? ಸದಾಕಾಲ ಕಟ್ಟಕಡೆಯ ಮನುಷ್ಯನ ದೃಷ್ಟಿಯಿಂದ ಆಲೋಚನೆ ಮಾಡುತ್ತಾ ಇದ್ದೇವೆಯೇ? ನಮ್ಮ ಚಿಂತನೆಗಳಲ್ಲಿ ಯುಗಾನುಕೂಲ ಪರಿವರ್ತನೆ ಆಗಿದೆಯಾ? ನಮ್ಮ ದೈನಂದಿನ ಉಪಯೋಗದ ಪಟ್ಟಿಯಲ್ಲಿರುವ ದೇಸಿ ವಸ್ತುಗಳು ಎಷ್ಟು ವಿದೇಶಿ ಎಷ್ಟು? ವೋಕಲ್ ಫಾರ್ ಲೋಕಲ್, ನಮ್ಮ ಮನೆಯಲ್ಲಿ ಎಷ್ಟಾಗಿದೆ? ಜನಸಾಮಾನ್ಯರ ಒಳ್ಳೆಯ ಕಾರ್ಯವನ್ನು ಗುರುತಿಸುವ ದೃಷ್ಟಿಯನ್ನು ನಾವು ಹೊಂದಿದ್ದೇವಾ? ಅನೇಕತಾ ಮೇ ಏಕತಾ, ರಾಷ್ಟ್ರಕೀ ವಿಶೇಷತಾ, ದೇಶದ ವೈವಿದ್ಯತೆಗಳನ್ನು ಗುರುತಿಸುವ ಗೌರವಿಸುವ ಕಾರ್ಯ ಮಾಡುತ್ತಿದ್ದೇವಾ? ಪ್ರತಿ ಜಾತಿ ಸಮುದಾಯದಲ್ಲಿ ರಾಷ್ಟ್ರವಾದದ ನಾಯಕತ್ವವನ್ನು ಬೆಳೆಸುತ್ತಿದ್ದೇವಾ? ನಮಗಿರುವ ರಾಜಕೀಯ ,ಸಾಮಾಜಿಕ ಪ್ರಜ್ಞೆ ಎಷ್ಟು? ಅಂತರಾಷ್ಟ್ರೀಯ ವಿಚಾರಗಳ ಅಧ್ಯಯನ ನಡೆಸುತ್ತಿದ್ದೇವಾ ಅಥವಾ ಕೂಪಮಂಡೂಕ ಗಳಾಗಿ ಬಿಟ್ಟಿದ್ದೇವಾ? ಅಂಗನವಾಡಿ ಮಕ್ಕಳಿಗೆ ಜನ್ಮದಿನ, ವಾರ್ಷಿಕೋತ್ಸವ ಮುಂತಾದ ಸಂದರ್ಭಗಳಲ್ಲಿ ಒಳ್ಳೆಯ ಆಹಾರ ತಯಾರಿಸಿ ಹಂಚಬಹುದೇ? ಅಂಗನವಾಡಿಗಳನ್ನು ದತ್ತು ತೆಗೆದುಕೊಳ್ಳಬಹುದೇ, ಶ್ರೀಮಂತರ ಮನೆಯ ಮಕ್ಕಳ ಆಟದ ಸಾಮಾನುಗಳನ್ನು ಸಂಗ್ರಹಿಸಿ ಅಂಗನವಾಡಿ ಮಕ್ಕಳಿಗೆ ಹಂಚಬಹುದೇ? ತಿಂಗಳಿಗೊಂದು ಅಭಿಯಾನದ ರೀತಿಯಲ್ಲಿ ತೆಗೆದುಕೊಂಡು ಸ್ವಚ್ಛ ಶಾಲೆ, ಸ್ವಚ್ಛ ಆಸ್ಪತ್ರೆ, ಸ್ವಚ್ಛ ಪಾರ್ಕ್, ಬಸ್ ನಿಲ್ದಾಣ ಹೀಗೆ ಸ್ವಚ್ಛತೆಯ ಸ್ಪರ್ಧೆ ಪ್ರಾರಂಭಿಸಬಹುದೇ? ಕಾರ್ಯಕರ್ತರನ್ನು ಕ್ರಿಯಾಶೀಲರನ್ನಾಗಿ ಮಾಡುವುದು ಹೇಗೆ? ಒಳ್ಳೆಯ ಅನುಭವಗಳನ್ನು ಹಂಚಿಕೊಂಡು ಪ್ರೇರಣೆ ಕೊಡಬಹುದೇ? ಹೀಗೆ ಒಂದೇ? ಎರಡೇ? ಐದು ಗಂಟೆಯ ಅಂತರದಲ್ಲಿ ನೂರಾರು ವಿಚಾರಗಳ ಕುರಿತಾಗಿ ಚರ್ಚೆ ನಡೆಯಿತು. ಯಾವ ವಿಚಾರವೂ ಏಕಮುಖವಾಗಿರಲಿಲ್ಲ, ಒಬ್ಬೊಬ್ಬರನ್ನು ಕೆಣಕಿ, ಅವರಿಂದ ವಿಷಯ ವಿಚಾರಗಳನ್ನು ಹೊರತೆಗೆದು, ನಮ್ಮಿಂದ ವಿಷಯ ತಿಳಿದುಕೊಳ್ಳುತ್ತಾ ಅವರೂ ಮಾರ್ಗದರ್ಶನ ಮಾಡುತ್ತಾ ನಮ್ಮನ್ನು ಆವರಿಸಿಕೊಂಡು ಬಿಟ್ಟರು!
ತಾನು ಪ್ರಚಾರಕನಾಗಿದ್ದ ಕಾಲದಲ್ಲಿ, ಸಾಮಾನ್ಯ ಕಾರ್ಯಕರ್ತ ಆಗಿದ್ದಂತಹ ಕಾಲದಿಂದ ನಡೆದ ವಿಚಾರಗಳು, ವಿದೇಶ ಪ್ರವಾಸದಲ್ಲಿ ತಾನು ಗಮನಿಸಿದ ಸೂಕ್ಷ್ಮಗಳು, ಗುಡ್ ಡಿಡ್ಸ್ ಗಳನ್ನು ಹೇಗೆ ಗುರುತಿಸುವುದು, ಸೂಕ್ಷ್ಮ ವಾಗಿ ನೋಡಿದಾಗ ಆಗುವ ಅನುಭವಗಳು ಹೇಗೆ ಸಹಾಯಕ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದರು. ಐದು ಘಂಟೆಗಳ ಸಮಯ ಹೋದದ್ದೇ ತಿಳಿಯಲಿಲ್ಲ. ನನಗೆ ಅನ್ನಿಸಿದು, ಒಬ್ಬ ವ್ಯಕ್ತಿ ಅದೆಷ್ಟು ವಿಷಯಗಳ ಬಗ್ಗೆ ಮಾಹಿತಿ ಹೊಂದಿದ್ದಾರೆ, ಸಣ್ಣ ಸಣ್ಣ ವಿಷಯ ವಿಚಾರಗಳ ಬಗ್ಗೆಯೂ ಆಲೋಚನೆ ಮಾಡುತ್ತಾರೆ. ಒಳ್ಳೆಯ ವಿಚಾರಗಳು ಎಲ್ಲಾ ಕಡೆಯಿಂದ ಹರಿದುಬರಲಿ ಎನ್ನುವ ಉದಾರ ಭಾವ, ಎಲ್ಲರನ್ನೂ ಒಗ್ಗೂಡಿಸಿಕೊಂಡು ರಾಷ್ಟ್ರ ಕಟ್ಟುವ ತವಕ ಅವರ ಪ್ರತಿ ಮಾತಿನಲ್ಲೂ ಹೊರಹೊಮ್ಮುತಿತ್ತು. ಐದು ಗಂಟೆಗಳ ಸಂವಾದದ ನಂತರ ಹೊರಗೆ ಬಂದಾಗ ಅದರ ಲಹರಿಯೇ ತುಂಬಿತ್ತು.
ಸಂವಾದ ಮುಗಿದು ಹೊರ ಬಂದಾಗ ನನಗೆ ಅನಿಸಿದ್ದು, ಯಾರೂ ಸುಮ್ಮನೆ ದೊಡ್ಡವರಾಗುವುದಿಲ್ಲ. ಸಣ್ಣ ಸಣ್ಣ ಸಂಗತಿಗಳ ಬಗ್ಗೆ ಧ್ಯಾನ ಸ್ವರೂಪಿ ಶ್ರದ್ಧೆ, ಪರಿಶ್ರಮ ಪರಿಪೂರ್ಣತೆಯ ಕಾರಣದಿಂದ ದೊಡ್ಡವರಾಗಿದ್ದಾರೆ. ಹಲವು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದೇಶದಲ್ಲಿ ಹಲವರಿಗೆ ಈ ಸತ್ಯವನ್ನು ಒಪ್ಪಿಕೊಳ್ಳಲು ರಾಜಕಾರಣ ಅಡ್ಡಿಯಾದರೆ ಇನ್ನು ಕೆಲವರಿಗೆ ತಾವು ಹುಟ್ಟಿರುವುದೇ ವಿರೋಧ ಮಾಡುವುದಕ್ಕಾಗಿ ಎನ್ನುವ ನಂಬಿಕೆ ಇರುವವರು ಏನು ಮಾಡುವುದು?
ನಮ್ಮ ಪ್ರಧಾನಿಗಳು ಚರೈವೇತಿ – ಚರೈವೇತಿ (ಮುನ್ನಡೆಯಿರಿ ಮುನ್ನಡೆಯಿರಿ) ಎಂಬ ತತ್ವದ ಮೇಲೆ ನಂಬಿಕೆ ಇಟ್ಟು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್”ಎಂಬ ಆಲೋಚನೆಯೊಂದಿಗೆ ತನ್ನ ಕೆಲಸ ತಾನು ಮಾಡುತ್ತಿದ್ದಾರೆ. ಹಗಲಿರುಳು ಒಂದೇ ಯೋಚನೆ, ನನ್ನ ದೇಶ ಶಕ್ತಿಶಾಲಿಯಾಗಬೇಕು, ದೇಶದ ಕಟ್ಟ ಕಡೆಯ ವ್ಯಕ್ತಿಗೆ ಬಲ ಬರಬೇಕು. ಇಂತಹ ನಾಯಕತ್ವ ಪಡೆದ ನಾವೇ ಧನ್ಯರು. ನಿನ್ನೆ ನಡೆದದ್ದು ನನ್ನ ಜೀವನದ ಪರಮ ಸೌಭಾಗ್ಯ, ನನ್ನ ಆಲೋಚನಾ ಧಾಟಿಯನ್ನೇ ಬದಲಾಯಿಸಿಬಿಟ್ಟರು.
ಅವರಿಗೆ ಧನ್ಯವಾದ ಹೇಳಿ ಹೊರ ಬಂದರೂ ತಲೆಯಲ್ಲಿ ಅವರು ಹೇಳಿದ ಮಾತುಗಳ ಲಹರಿಯಲ್ಲಿ ತೇಲುತ್ತಿದೆ. ರಾತ್ರಿ ಇಡೀ ಅವರು ಬಿತ್ತಿದ ವಿಚಾರಗಳ ಕನವರಿಕೆ…