ಬೆಂಗಳೂರು:ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಪ್ರತ್ಯಕವಾಗಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸಕ್ತ ಸಾಲಿನಿಂದ (2023-24) ಎಲ್ಲವನ್ನೂ ಒಟ್ಟಿಗೇ, ಒಮ್ಮೆಗೇ ನಡೆಸಲು ತೀರ್ಮಾನಿಸಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಸುಧಾರಣಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ, ಕೃಷಿ, ನರ್ಸಿಂಗ್, ಅರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸ್ಗಳ ಪ್ರವೇಶಕ್ಕೆ ಸಂಯೋಜಿತ ಸೀಟು ಹಂಚಿಕೆ (Combined Seat Allotment) ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಹೀಗೆ ಮಾಡುತ್ತಿರುವುದು ಇದೇ ಮೊದಲು ಎಂದು ಅವರು ವಿವರಿಸಿದ್ದಾರೆ.
ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನಾನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕೋರ್ಸ್ಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರು ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್ಗಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಯಾವುದೇ ಕೋರ್ಸ್‌ಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್ ಎಂಟ್ರಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.


























































