ಹುಬ್ಬಳ್ಳಿ: ಪಿಎಸ್ಐ ನೇಮಕಾತಿ ಹಗರಣ ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿನ ನೇಮಕಾತಿ ಅಕ್ತಮ ಕುರಿತಂತೆ ಸಚಿವ ಅಶ್ವತ್ಥನಾರಾಯಣ ವಿರುದ್ದ ತನಿಖೆ ನಡೆಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ಕೇವಲ ಫಲಾನುಭವಿಗಳನ್ನು ಮಾತ್ರ ಬಂಧಿಸುತ್ತದೆ. ಇವರು ಅಕ್ರಮದ ಅಂಗಡಿ ತೆರೆದ ಕಾರಣಕ್ಕೆ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ಅಕ್ರಮದಲ್ಲಿ ಯಾರೆಲ್ಲಾ ಪ್ರಭಾವಿ ಮಂತ್ರಿಗಳು ಭಾಗಿಯಾಗಿದ್ದಾರೆ, ಬೆಂಬಲವಾಗಿ ನಿಂತಿದ್ದಾರೆ ಎಂಬುದು ಗೊತ್ತಾಗಬೇಕು ಎಂದರು.
ಸಚಿವ ಸ್ವತಃ ನಾರಾಯಣ್ ಅವರು ಕರೆ ಮಾಡದಿದ್ದರೆ ಅಕ್ರಮ ಆರೋಪ ಹೊತ್ತಿರುವ ಅಭ್ಯರ್ಥಿಯನ್ನು ಪೊಲೀಸರು ವಿಚಾರಣೆ ಮಾಡದೆ ಬಿಡುತ್ತಿದ್ದರೇ? ಎಲ್ಲರನ್ನೂ ಕರೆಸಿ ವಿಚಾರಣೆ ಮಾಡುವಾಗ, ಸಚಿವರಿಗೆ ಬೇಕಾದ ಅಭ್ಯರ್ಥಿಯನ್ನು ಮಾತ್ರ ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿಯವರು ಸತ್ಯ ತಿಳಿಸಿದ್ದಾರೆ ಎಂದು ಡಿಕೆಶಿ ಹೇಳಿದರು.
ಸಚಿವ ಅಶ್ವತ್ ನಾರಾಯಣ್ ಅವರು ಮೊದಲಿನಿಂದಲೂ ನರ್ಸಿಂಗ್ ಮಾರ್ಕ್ಸ್ ಕಾರ್ಡ್, ಸರ್ಟಿಫಿಕೇಟ್‌ಗಳನ್ನು ಕೊಟ್ಟು ದಂಧೆ ನಡೆಸುತ್ತಿದ್ದರು ಎಂದು ಹೆಚ್ಡಿಕೆ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಈ ಗಂಭೀರ ಆರೋಪ ಮಾಡಿದ್ದು ಈ ವಿಚಾರವಾಗಿ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳಾಗಿದ್ದವರು ಆಧಾರ ಇಲ್ಲದೆ ಆರೋಪ ಮಾಡುತ್ತಾರಾ? ಅವರ ಆರೋಪ ಸುಳ್ಳಾಗಿದ್ದರೆ ಸುಳ್ಳು ಹೇಳಿದ ಕಾರಣಕ್ಕೆ ಅವರ ವಿರುದ್ಧವೇ ಪ್ರಕರಣ ದಾಖಲಿಸಲಿ’ ಎಂದು ಡಿಕೆಶಿ ಆಗ್ರಹಿಸಿದರು.
ಈ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ‘ಖಂಡಿತವಾಗಿಯೂ ಸರ್ಕಾರ ಎಲ್ಲಾ ಅಕ್ರಮಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಈ ಅಕ್ರಮಗಳಿಗೆ ಯಾರು ಬೆಂಬಲವಾಗಿ ನಿಂತರು, ಯಾರು ಅಕ್ರಮವಾಗಿ ಕೆಲಸ ಕೊಡಿಸಲು ಮುಂದಾದರು ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ನನ್ನ ಕಿವಿಗೆ ಬೀಳುತ್ತಿದೆ’ ಎಂದರು.
ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ನೇಮಕದಲ್ಲಿ ಅಕ್ರಮ ನಡೆದಿರುವ ಗುಮಾನಿ ಇದೆ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಲಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಗಲಿ ನೇಮಕಾತಿ ಅಕ್ರಮ ನಡೆದಿದ್ದರೆ ಅದರ ಬಗ್ಗೆಯೂ ಸರ್ಕಾರ ತನಿಖೆಗೆ ಆದೇಶಿಸಲಿ. ನಾನು ಇಂಧನ ಸಚಿವನಾಗಿದ್ದ ಸಮಯದಲ್ಲಿ ಸುಮಾರು ಮೂವತ್ತು ಸಾವಿರ ಹುದ್ದೆಗಳ ನೇಮಕ ಮಾಡಿದ್ದೇನೆ. ಯಾರಾದರೂ ಒಬ್ಬರು ನಾನು ಶಿವಕುಮಾರ್ ಅವರಿಗೆ ಲಂಚ ಕೊಟ್ಟು ಕೆಲಸಕ್ಕೆ ಸೇರಿದ್ದೇನೆ ಎಂದು ಹೇಳಿದರೆ ನಮಗೂ ಹಗ್ಗ ಹಾಕಿ’ ಎಂದರು.