ಬೆಂಗಳೂರು: ಅಕಾಲಿಕ ಮಳೆಯಿಂದ ನಷ್ಟಕ್ಕೊಳಗಾದ ಮಾವು ಬೆಳೆಗಾರರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ ಮಾತನಾಡಿ, ಈ ವರ್ಷ ಉತ್ತಮ ಮಾವು ಫಸಲಿನ ನಿರೀಕ್ಷೆಯಲ್ಲಿ ಇದ್ದೆವು. ಆದರೆ ಅಕಾಲಿಕ ಮಳೆಯಿಂದಾಗಿ ಕಾಯಿ ಕಚ್ಚದೆ ಬೆಳೆ ಸಂಪೂರ್ಣ ನಾಶ ಆಗಿದೆ. ಬೆಳೆಗೆ ಬಳಸಿದ್ದ ರಾಸಾಯನಿಕ ಗೊಬ್ಬರ, ಕೂಲಿ, ಕೀಟ ನಾಶಕದ ಮೇಲೆ ಹೂಡಿದ್ದ ಬಂಡವಾಳವೂ ರೈತರಿಗೆ ಭಾರವಾಗಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಗಳು ರೈತರ ನೆರವಿಗೆ ಬಂದಿಲ್ಲ.
ಹೀಗಾಗಿ ಈ ಕೂಡಲೆ ತೋಟಗಾರಿಕೆ ಇಲಾಖೆ, ಮಾವು ಬೆಳೆಗಾರರ ಮಂಡಳಿ ಹಾಗೂ ಸರ್ಕಾರ ಬೆಳೆ ನಷ್ಟ ಸಮೀಕ್ಷೆ ನಡೆಸಿ ಮಾವು ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.