ಮಂಗಳೂರು: ಬಂದರು ನಗರಿ ಹೊರವಲಯದ ಹರೇಕಳ ಕಡವಿನ ಬಳಿ ನೇತ್ರಾವತಿ ನದಿಯಲ್ಲಿ ಮಹಿಳೆ ಮತ್ತು ಮಗುವಿನ ಶವ ಪತ್ತೆಯಾಗಿದೆ. ತಾಯಿ ಮತ್ತು ಮಗು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮೃತ ಮಹಿಳೆಯನ್ನು ಅಡ್ಯಾರು ನಿವಾಸಿ ಚೈತ್ರಾ( 30) ಎಂದು ಗುರುತಿಸಲಾಗಿದೆ. ಈ ಮಹಿಳೆ ಶುಕ್ರವಾರ ಮಧ್ಯಾಹ ತನ್ನ ಒಂದು ವರ್ಷದ ಮಗು ದಿಯಾಂಶ್ ಜತೆ ಸೇತುವೆಯ ಮೂಲಕ ನಡೆದುಕೊಂಡು ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ. ಆದರೆ ರಾತ್ರಿ ಇವರು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದಕ್ಕೂ ಮುನ್ನ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ರಾತ್ರಿ 8.30ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿರುವ ವಿಷಯವೂ ಸಿಕ್ಕಿತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ಮೃತ ತಾಯಿ-ಮಗುವಿನ ಗುರುತನ್ನು ಪತ್ತೆ ಹಚ್ಚಿದ್ದಾರೆ.