ಮಂಗಳೂರು: ರಾಜ್ಯ ಕರಾವಳಿಯು ಬಿಜೆಪಿಯ ಭದ್ರಕೋಟೆ ಎನಿಸಿದರೂ ‘ಉಳ್ಳಾಲ’ ಎಂದೇ ಗುರುತಾಗಿರುವ ಮಂಗಳೂರು ವಿಧಾನಸಭಾ ಕ್ಷೇತ್ರ ಅಕ್ಷರಶಃ ಕಾಂಗ್ರೆಸ್‌ನ ಪ್ರಾಬಲ್ಯದ ಅಡ್ಡ. ಈ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆಲುವಿನ ನಗೆ ಬೀರಿದೆಯೇ ಹೊರತು, ಅನಂತರದ ಕಮಲ ಪಕ್ಷದ ಹೋರಾಟಗಳೆಲ್ಲವೂ ವ್ಯರ್ಥವಾಗಿದೆ. ಆದರೆ ಈ ಬಾರಿ ಬಿಜೆಪಿಯ ರಣೋತ್ಸಾಹ ಎಂದಿನಂತಿಲ್ಲ.
ಕಾಂಗ್ರೆಸ್ ಅಡ್ಡೆಗೆ ಲಗ್ಗೆ ಹಾಕಿರುವ ಬಿಜೆಪಿ ಈ ಬಾರಿ ಅಚ್ಚರಿ ಎಂಬಂತೆ ಕಾರ್ಯಕರ್ತ ಸತೀಶ್ ಕುಂಪಲ ಅವರನ್ನು ಕಣಕ್ಕಿಳಿಸಿದೆ. RSS ಧುರೀಣ ಪ್ರಭಾಕರ ಭಟ್ ಸಹಿತ ಸಂಘದ ಪ್ರಮುಖರ ನಿರ್ಧಾರದಂತೆ ಕುಂಪಲ ಅವರನ್ನು ಕಣಕ್ಕಿಳಿಸಿದ್ದೇ ಬಿಜೆಪಿಯ ರಣೋತ್ಸಾಹಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಅವರ ಗೆಲುವಿನ ಅಭಿಯಾನಕ್ಕೆ ಸೆಡ್ಡು ಹೊಡೆಯಲು ರಣವ್ಯೂಹ ರೂಪಿಸಿರುವ ಕಮಲ ಸೈನ್ಯವು ಗುರುವಾರ ಸತೀಶ್ ಕುಂಪಲ ಅವರ ಉಮೇದುವಾರಿಕೆ ಸಂದಂಭದಲ್ಲಿ ಶಕ್ತಿಪ್ರದರ್ಶನ ನಡೆಸಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಅವರು ಗುರುವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಬೆಂಬಲಿಗರ ಜತೆಗೆ ಚುನಾವಣಾ ಅಧಿಕಾರಿ ಕೆ.ರಾಜು ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರನ್ನು ಪಂಡಿತ್ ಹೌಸ್‌ನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಿಂದ ಅಪಾರ ಸಂಖ್ಯೆಯ ಕೇಸರಿ ಕಾರ್ಯಕರ್ತರು ಮೆರವಣಿಗೆ ಮೂಲಕ ತೊಕ್ಕೊಟ್ಟು ಪಟ್ಟಣಕ್ಕೆ ಕರೆದೊಯ್ಯಲಾಯಿತು.
ಇದೇ ಸಂದರ್ಭದಲ್ಲಿ, ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣ ಬಳಿಯ ಮೈದಾನದಲ್ಲಿ ಜನಸ್ತೋಮವನ್ನು ಮಾತನಾಡಿದ ಬಿಜೆಪಿ ಹುರಿಯಾಳು ಸತೀಶ್ ಕುಂಪಲ, ಉಳ್ಳಾಲ ನೂತನ ತಾಲೂಕು ಪಂಚಾಯಿತಿ ಘೋಷಣೆ ಆದರೆ ಸಾಲದು, ಜನರಿಗೆ ಅದರ ಪ್ರಯೋಜನ ಸಿಗಬೇಕಿದೆ ಎಂದರು. ಇಲ್ಲಿಗೆ ನೂರಾರು ಯೋಜನೆ ಬರಬೇಕಿತ್ತು. ಬಿಜೆಪಿ ನೀಡಿದ ಯೋಜನೆಯನ್ನು ಶಾಸಕ ಯು.ಟಿ. ಖಾದರ್ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದರು.
ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾಗಬೇಕಿದ್ದ ರಸ್ತೆ ಈಗ ನಿರ್ಮಾಣವಾಗ್ತಿದೆ. ಕಡಲ್ಕೊರೆತ ಸಮಸ್ಯೆ ಪರಿಹಾರವಾಗಿಲ್ಲ. ಬೃಹತ್ ಕುಡಿಯುವ ನೀರಿನ ಯೋಜನೆ ಹೆಸರಿಗೆ ಮಾತ್ರ, ತೊಟ್ಟು ಹನಿ ಬರಲಿಲ್ಲ. ಇಲ್ಲಿ ಅಪ್ಪ ಮಕ್ಕಳು ಶಾಸಕರಾಗಿ ಅಭಿವೃದ್ಧಿ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮುಖಂಡರಾದ ಸಂತೋಷ್ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಉಳ್ಳಾಲ ಮೊದಲಾದ ಮುಖಂಡರು ಉಪಸ್ಥಿತರಿದ್ದರು.




























































