ಮಂಗಳೂರು: ಸಂಘ ಪರಿವಾರದ ಸಂಘಟನೆಯು ಮಂಗಳೂರಿನಲ್ಲಿ ತ್ರಿಶೂಲ ಹಂಚಿರುವ ಕಾರ್ಯಕ್ರಮ ಬಗ್ಗೆ ಕಾಂಗ್ರೆಸ್ ನಾಯಕರು ತಮ್ಮದೇ ದಾಟಿಯಲ್ಲಿ ಟೀಕಿಸಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ತ್ರಿಶೂಲಕ್ಕೆ ಅದರದ್ದೇ ಆದ ವಿಶೇಷ ಸ್ಥಾನಮಾನ ನೀಡಲಾಗಿದೆ. ಇಂದು ಅದನ್ನು ಹಂಚಲಾಗಿದ್ದು, ಅದನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಲಿ. ಬೇರೆ ಇತರೆ ಕೆಲಸಕ್ಕೆ ಬಳಸುವುದು ಬೇಡ ಎಂದಿದ್ದಾರೆ.
ಬಿಜೆಪಿಯಲ್ಲಿ ಸಂಘ ಪರಿವಾರದ್ದೇ ಅಂತಿಮ ನಿರ್ಧಾರ. ಆಡ್ವಾಣಿ ಅವರು ಪಾಕಿಸ್ತಾನಕ್ಕೆ ಹೋಗಿ ಜಿನ್ನಾ ಅವರನ್ನು ಜಾತ್ಯಾತೀತ ನಾಯಕ ಎಂದು ಹೇಳಿದ ತಕ್ಷಣವೇ ಅವರನ್ನು ಅವರ ಸ್ಥಾನದಿಂದ ಕೆಳಗಿಳಿಸಿದರು. ಅಲ್ಲಿ ಸಂಘ ಪರಿವಾರ ಹೇಳಿದಂತೆ ಪ್ರಧಾನಮಂತ್ರಿಗಳೂ, ಕೇಂದ್ರ ಮಂತ್ರಿಗಳು ಹಾಗೂ ಬೇರೆ ರಾಜ್ಯಗಳ ಸಿಎಂ ಕೇಳಬೇಕು. ಇಲ್ಲದಿದ್ದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ, ಅವರಿಗೆ ಬೆಲೆ ಇಲ್ಲವಾಗುತ್ತದೆ. ಹೀಗಾಗಿ ಇಡೀ ಸರ್ಕಾರವೇ ಸಂಘ ಪರಿವಾರದ ನಿಯಂತ್ರಣದಲ್ಲಿದೆ ಎಂದವರು ಹೇಳಿದರು.
ಪರ್ಸೆಂಟೇಜ್ ರಾಜಕಾರಣ:
ನಮ್ಮ ನಾಯಕರಾಗಲಿ, ಬೆರೆಯವರಾಗಲಿ ಲೋಕಾರೂಢಿಯಲ್ಲಿ ಮಾತನಾಡಿದರೆ ಅದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ. ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್, ವಿಶ್ವನಾಥ್ ಹಾಗೂ ಇತರೆ ನಾಯಕರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ದೊಡ್ಡ ಉದ್ಯಮಿಗಳಿಗೆ 7.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಿಲ್ಲ. ಯಾವುದೇ ಲಾಭ ಇಲ್ಲದೆ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದ್ದಾರಾ ಅಂತಾ ಜನ ಮಾತನಾಡುತ್ತಿದ್ದಾರೆ ಎಂದು ರಾಮಲಿಂಗಾವರೆಡ್ಡಿ ಹೇಳಿದರು.
ಸಲೀಂ ಹಾಗೂ ಉಗ್ರಪ್ಪ ಅವರು ಮಾತನಾಡಿಕೊಂಡಿರುವುದಕ್ಕೆ ಯಾವುದೇ ಆಧಾರವಿಲ್ಲ. ಇದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ಆದರೆ ಅದಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದವರು ಹೇಳಿದರು.
ಮೋದಿ ಅವರು ಬಂದು 10% ಸರ್ಕಾರ ಎಂದಿದ್ದರು. ಆಗ ನಾನು ಮೋದಿ ಅವರು ಸಿಎಂ ಆಗಿದ್ದಾಗ ಮಾಡಿದ್ದನ್ನು ಸಿದ್ದರಾಮಯ್ಯ ಅವರಿಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದೆ. ಈಗ ರಾಜ್ಯದಲ್ಲಿ ಎಷ್ಟು ಪರ್ಸೆಂಟೇಜ್ ಆಗಿದೆ ಎಂದು ಪ್ರಶ್ನಿಸಿ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.