ಮಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಹಿರೇಕೊಡಿಯ ನಂದಿ ಪರ್ವತ ಆಶ್ರಮದ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜೈನ ಸಮುದಾಯದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹತ್ಯೆ ಘಟನೆಯನ್ನು ಖಂಡಿಸಿರುವ ಭಾರತೀಯ ಜೈನ್ ಮಿಲನ್‌ನ ಮಂಗಳೂರು ವಿಭಾಗದ ಪ್ರಮುಖರು, ಜೈನ ಮುನಿಯ ಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಾಗೂ ಜೈನ ಸಮಾಜದ ಮುನಿ ಸಂತರಿಗೆ ಸೂಕ್ತ ರಕ್ಷಣೆ ಒದಗಿಸಬೇಜೆಂದು ಆಗ್ರಹಿಸಿ ಸೋಮವಾರ ಮಂಗಳೂರು ನಗರದಲ್ಲಿ ಬೃಹತ್ ರಾಲಿ ಆಯೋಜಿಸಿದೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಜೈನ್ ಮಿಲನ್‌ನ ಮಂಗಳೂರು ವಿಭಾಗದ ಮುಖಂಡ ಪುಷ್ಪರಾಜ್ ಜೈನ್, 10-07-2023ರಂದು ಸೋಮವಾರ ಅಪರಾಹ್ನ 3.00 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿಯವರ ಕಚೇರಿ ಯವರೆಗೆ ಮೌನ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮೂಡುಬಿದಿರೆ ಮಠದ ಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಮೆರವಣಿಗೆಯಲ್ಲಿ, ಮಂಗಳೂರು ವಿಭಾಗದ ಎಲ್ಲಾ ಜೈನ್ ಮಿಲನ್ ಪದಾಧಿಕಾರಿಗಳು ಸದಸ್ಯರು ಹಾಗೂ ಸಮಾಜದ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಮಾಜದ ಬಾಂಧವರು ಭಾಗವಹಿಸಬೇಕೆಂದು ಪುಷ್ಪರಾಜ್ ಜೈನ್ ಅವರು ಮನವಿ ಮಾಡಿದ್ದಾರೆ.
ಜೈನ ಮುನಿ ಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದವರು ತಿಳಿಸಿದ್ದಾರೆ.