ಮಂಗಳೂರು: ಬಂದರು ನಗರಿ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ನವೀಕೃತ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕಾ ಮಂಟಪದ ಉದ್ಘಾಟನೆ ನೆರವೇರಿತು.
ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಬುಧವಾರ ವಿವಿಧ ಕೈಂಕರ್ಯಗಳ ಮೂಲಕ ಗುರು ಪಾದುಕಾ ಮಂಟಪವನ್ನು ಪೂಜಾಕಾರ್ಯಕ್ಕೆ ಸಮರ್ಪಿಸಿದರು. ಬಳಿಕ ಸಂಸ್ಥಾನದ ಕೀರ್ತಿಯನ್ನು ಉತ್ತುಂಗಕ್ಕೇರಿಸಿ ಜತೆಗೆ ಸಮಾಜವನ್ನೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ ಶಿಷ್ಯವರ್ಗದ ಪಾಲಿಗೆ ಮಾತನಾಡುವ ದೇವರೆನಿಸಿದ್ದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕೆಯನ್ನು ಶ್ರೀಗಳವರು ಪ್ರತಿಷ್ಠಾಪಿಸಿದರು.
ಗುರುವಾರದಂದು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಐದನೇ ಪುಣ್ಯತಿಥಿ ಆರಾಧನೆಯು ಈ ಬಾರಿ ಮಂಗಳೂರಿನ ಶ್ರೀ ವೆಂಕಟರಮಣ ದೇವಳದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ.
ಅಂದು ರಾತ್ರಿ ಶ್ರೀ ದೇವಳದಲ್ಲಿ ವಿಶೇಷ ಸ್ವರ್ಣ ಗರುಡೋತ್ಸವ, ಸಂಸ್ಥಾನದಲ್ಲಿ ಪ್ರಧಾನ ಶ್ರೀ ವೇದವ್ಯಾಸ ದೇವರಿಗೆ ಕನಕಾಭಿಷೇಕ , ಗಂಗಾಭಿಷೇಕ, ಲಘು ವಿಷ್ಣು ಅಭಿಷೇಕಗಳು ನಡೆಯಲಿವೆ. ರಾತ್ರಿ ಸಂಸ್ಥಾನದ ಶ್ರೀ ವೇದವ್ಯಾಸ ದೇವರಿಗೆ ಸ್ವರ್ಣ ಗರುಡ ವಾಹನ ಸೇವೆ ಶ್ರೀಗಳವರ ದಿವ್ಯ ಹಸ್ತಗಳಿಂದ ನಡೆಯಲಿದೆ.
ಶ್ರೀಗಳವರು ಈ ಬಾರಿ ಒಂದು ತಿಂಗಳ ಪರ್ಯಂತ ಶ್ರೀದೇವಳದಲ್ಲಿ ಮೊಕ್ಕಾಂ ಮಾಡಲಿದ್ದು ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಶ್ರೀ ವಾಯುಸ್ತುತಿ, ಶ್ರೀ ನರಸಿಂಹ ಸ್ತುತಿ ನಮಸ್ಕಾರ , ಶ್ರೀ ವೀರ ವೆಂಕಟೇಶ ದೇವರ ಲಕ್ಷ ಪ್ರದಕ್ಷಿಣಾ ನಮಸ್ಕಾರ, ಸಂಸ್ಥಾನದ ದೇವರ ಸನ್ನಿಧಿಯಲ್ಲಿ ಲಕ್ಷ ತುಳಸಿ ಅರ್ಚನೆ , ಚಂಡಿಕಾ ಹವನ , ಗಾಯತ್ರಿ ಹವನ, ವಾಯುಸ್ತುತಿ ಹವನ ಕಾರ್ಯಕ್ರಮಗಳು ನರೆವೇರಲಿದೆ.
ಬುಧವಾರ ನೆರವೇರಿದ ಗುರುಪಾದುಕಾ ಮಂಟಪದ ಉದ್ಘಾಟನಾ ಕೈಂಕರ್ಯದ ಸಂದರ್ಭದಲ್ಲಿ, ಶ್ರೀ ದೇವಳದ ಮೊಕ್ತೇಸರರಾದ ಸಿ.ಎಲ್.ಶೆಣೈ , ಕೆ.ಪಿ.ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.