(ವರದಿ: ಪ್ರತಾಪ್ ರಾಜ್, ವಿಶೇಷ ಪ್ರತಿನಿಧಿ)
ಇದು ರಾಜ್ಯ ಸರ್ಕಾರದ ವೈಫಲ್ಯವೋ.. ಅಥವಾ ಸಂಸದರು, ಶಾಸಕರು, ಅಧಿಕಾರಿಗಳ ನಿರ್ಲಕ್ಷ್ಯವೋ? ಆದರೆ ಈ ವ್ಯವಸ್ಥೆ ನಮ್ಮ ಸಹನೆಯನ್ನು ಪ್ರಶ್ನಿಸುತ್ತಿದೆ ಎಂದು ಮಂಗಳೂರಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ..
ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರದಿಂದ ಬಂದರು ನಗರಿ ಮಂಗಳೂರು ಕೂಡಾ ದೂರ ಉಳಿದಿಲ್ಲ. ಉದ್ಯಾನ ನಗರಿಯಂತೆ ಪ್ರಗತಿಯ ಹಾದಿಯಲ್ಲಿದೆ ಎನ್ನಲಾಗುತ್ತಿರುವ ಮಂಗಳೂರು ಕೂಡಾ ಅದ್ವಾನ ನಗರಿ ಎಂಬಂತಾಗಿದೆ. ಇದಕ್ಕೆ ಸಾಕ್ಷಿಯಾಗಿದೆ ಮಂಗಳೂರಿನ ಕಾರ್ ಸ್ಟ್ರೀಟ್.
ರಥಬೀದಿಯು ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಗಳಿಂದಾಗಿ ಅವ್ಯವಸ್ಥೆಯ ಆಗರವಾಗಿದೆ ಎಂಬುದಕ್ಕೆ ಈ ಫೊಟೋ ಹೊರತಾಗಿ ಬೇರೆ ಯಾವ ಸಾಕ್ಷಿಯೂ ಬೇಕಿಲ್ಲ. ಈ ರಥಬೀದಿ ರಸ್ತೆ ಕಾಂಕ್ರೀಟೀಕರಣಗೊಂಡು ಹೆಚ್ಚೇನು ತಿಂಗಳಾಗಿಲ್ಲ. ಒಂದು ತಿಂಗಳೂ ಕಳೆದಿಲ್ಲ ಎಂದು ಲೆಕ್ಕ ಹಾಕುವಷ್ಟರಲ್ಲೇ ಈ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕಲಾಗಿದೆ ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ವ್ಯರ್ಥ ಮಾಡಿರುವುದಕ್ಕೆ ಒಂದು ಉತ್ತಮ ಉದಾಹರಣೆ ಎಂದೂ ಹಲವರು ಬೊಟ್ಟು ಮಾಡಿದ್ದಾರೆ.

ಸುಮಾರು 17 ಕೋಟಿ ರೂ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎನ್ನಲಾದ ಕಾಂಕ್ರೇಟ್ ರಸ್ತೆ ಉದ್ಘಾಟನಗೆ ಮೊದಲೇ ಅಗೆದು ಹಾಕಲಾಗಿದೆ ಎನ್ನುತ್ತಿರುವ ಜನತೆ, ಇಲ್ಲಿ ಯಾರೂ ಹೇಳುವವರಿಲ್ಲವೇ? ಕೇಳುವವರಿಲ್ಲವೇ? ಎಂಬ ಸಿಟ್ಟನ್ನೂ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ.. ಬಿಎಸ್‌ವೈ ಬದಲಾವಣೆ ಇಲ್ಲ ಎಂದ ಹೈಕಮಾಂಡ್.. ಆದರೆ ಅಮಿತ್ ಶಾ ನಡೆ ಇನ್ನೂ ನಿಗೂಢ..
ಸ್ಮಾರ್ಟ್ ಸಿಟಿ ಅಧಿಕಾರಿಗಳಲ್ಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳಲ್ಲಿ ವ್ಯವಸ್ಥಿತ ಪ್ಲಾನ್ ಇಲ್ಲವೇ? ಸಾರ್ವಜನಿಕರಿಗಾಗುವ ತೊಂದರೆ ಬಗ್ಗೆ ಈ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲವೇ? ಎಂಬ ಪ್ರಶ್ನೆಗಳನ್ನೂ ಈ ಚಿತ್ರಣಗಳು ಹುಟ್ಟುಹಾಕುವಂತಿದೆ.
ಅಂದ ಹಾಗೆ ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷರ ತವರು ಜಿಲ್ಲೆಯ ಕೇಂದ್ರಸ್ಥಾನದಲ್ಲಿನ ಅವಾಂತರವಿದು. ಈ ಸ್ಥಳವನ್ನು ಲೋಕಸಭೆಯಲ್ಲೂ ಪ್ರತಿನಿಧಿಸುವವರೂ ಇವರೇ. ಅಷ್ಟೇ ಅಲ್ಲ, ಇಲ್ಲಿನ ಶಾಸಕರೂ ಬಿಜೆಪಿಯವರೇ. ಕೇಂದ್ರ, ರಾಜ್ಯಗಳ ಗದ್ದುಗೆಯಲ್ಲಿರುವುದೂ ಬಿಜೆಪಿ ಸರ್ಕಾರವೇ. ಹೀಗಿದ್ದರೂ ಜನಪ್ರತಿನಿಧಿಗಳು ಈ ಪರಿಸ್ಥಿತಿ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಸಂಬಂಧಪಟ್ಟ ಜನ ಪ್ರತಿ ನಿಧಿಗಳೂ ಈ ಬಗ್ಗೆ ಗಮನಹರಿಸುತ್ತಿಲ್ಲವೇಕೆ? ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಂತಿದೆ.