📝 ರಾಘವೇಂದ್ರ ಗಂಜಾಮ್
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ನಡೆದ
ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮುಖಭಂಗ ಅನುಭವಿಸುವ ಮೂಲಕ ಪಕ್ಷದ ಭದ್ರ ಕೋಟೆಯ ಹಣೆಪಟ್ಟಿ ಕಳೆದುಕೊಂಡಿದೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಗಳಿಸುವ ಮೂಲಕ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ.
ಹೌದು! ಸಕ್ಕರೆನಾಡು ಮಂಡ್ಯ ಜಿಲ್ಲೆ ಜೆಡಿಎಸ್
ನ ಭದ್ರಕೋಟೆ ಎಂದೇಳುತ್ತಿದ್ದ ದಳಪತಿಗಳಿಗೆ
ಇದೀಗ ಮಂಡ್ಯ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್
ಅಭ್ಯರ್ಥಿಯ ಸೋಲು ಭದ್ರಕೋಟೆ ಎನ್ನುವ ಹಣೆಪಟ್ಟಿ ಕಳಚಿ ಹಾಕಿದೆ. ಅದ್ರಲ್ಲೂ ಎರಡು ವರ್ಷದಿಂದೀಚೆಗೆ ಜಿಲ್ಲೆಯಲ್ಲಿ ನಡೆದ ಮೂರು ಚುನಾವಣೆಗಳಾದ ಲೋಕಸಭೆ ಚುನಾವಣೆ ಸೋಲು, ಉಪಚುನಾವಣೆ ಸೋಲು ಹಾಗೂ ಪರಿಷತ್ ಚುನಾವಣೆ ಸೋಲು ಇದೀಗ ಭದ್ರ ಕೋಟೆ ಎನ್ನುತ್ತಿದ್ದ ದಳಪತಿಗಳಿಗೆ ಮುಖಭಂಗ ತರಿಸಿದೆ. ಇಂದು ನಡೆದ ಪರಿಷತ್ ಚುನಾವಣೆಯ ಮತ ಎಣಿಕೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡ ಸೋಲು ಇದೀಗ ಜಿಲ್ಲೆಯಲ್ಲಿ
ಜೆಡಿಎಸ್ ನಾಯಕರನ್ನು ಕೆಂಗೆಡಿಸಿದೆ.
ಡಿ-10 ರಂದು ನಡೆದಿದ್ದ ಪರಿಷತ್ ಚುನಾವಣೆಯ ಮತದಾನದ ಬಳಿಕ ಜೆಡಿಎಸ್ ನಾಯಕರು
ಪಕ್ಷದ ಅಭ್ಯರ್ಥಿ ಗೆಲ್ಲುವ ಬಗ್ಗೆ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಂಡಿದ್ರು. ಇಂದು ಮತ ಎಣಿಕೆ
ಆರಂಭವಾಗುತ್ತಲೆ ಕಾಂಗ್ರೆಸ್ ಅಭ್ಯರ್ಥಿ ಗೂಳಿ ಗೌಡ ಮೊದಲ ಸುತ್ತಿನ ಮತ ಎಣಿಕೆಯಲ್ಲಿ 160ಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 97 ಮತಗಳ ಅಂತರದ ಗೆಲುವು ಸಾಧಿಸಿದರು.
ಮಂಡ್ಯ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಒಟ್ಟು 4018 ಮತ ಚಲಾವಣೆಯಾಗಿದ್ದವು. ಮತ ಎಣಿಕೆ ವೇಳೆ 01 ಅಂಚೆ ಮತ ಸೇರಿ 4019 ಮತಗಳು ಚಲಾವಣೆಯಾಗಿತ್ತು. ಮತ ಎಣಿಕೆ ವೇಳೆ 46 ಮತಗಳು ತಿರಸ್ಕೃತವಾಗಿದ್ದು ಒಟ್ಟು 3973 ಮತಗಳು ಸಿಂಧು ಮತವಾಗಿತ್ತು. ಈ ಪೈಕಿ ಜೆಡಿಎಸ್‌ನ ಎನ್. ಅಪ್ಪಾಜಿಗೌಡ 1912 ಮತ ಪಡೆದ್ರೆ, ಕಾಂಗ್ರೆಸ್ ನ ದಿನೇಶ್ ಗೂಳಿಗೌಡ 2009 ಮತ ಪಡೆದುಕೊಂಡ್ರು. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬೂಕಹಳ್ಳಿ ಬಿ.ಸಿ ಮಂಜು 50 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಮಂಜುನಾಥ್ 02 ಮತಗಳನ್ನು ಪಡೆದುಕೊಂಡ್ರು. ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ 97 ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು.
ಕೈ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ
ಗೆಲುವು ಸಾಧಿಸುತ್ತಿದ್ದಂತೆ ಮತಗಟ್ಟೆ ಕೇಂದ್ರಸ ಬಳಿ ಪಕ್ಷದ ಕಾರ್ಯಕರ್ತರು ಪಕ್ಷದ ಭಾವುಟ
ಹಿಡಿದು ಜೈಕಾರ ಕೂಗಿ ಸಂಭ್ರಮಿಸಿದ್ರೆ, ಶ್ರೀರಂಗ ಪಟ್ಟಣದಲ್ಲಿ ಮಾಜಿ ಶಾಸಕ ರಮೇಶ್ ಬಾಬು
ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ
ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ರು.
ಈ ನಡುವೆ, ಮಂಡ್ಯ ಜಿಲ್ಲೆಯಲ್ಲಿ ಪಕ್ಷದ ಸೋಲಿಗೆ ಬಿಜೆಪಿ ಪಕ್ಷ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೆ ಕಾರಣ ಎಂದು ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿ ಅಪ್ಪಾಜಿಗೌಡ ಆರೋಪಿಸಿದ್ರು.
ಒಟ್ಟಾರೆ ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿದ್ದ ಮಂಡ್ಯ ಜಿಲ್ಲೆಯ ಇದೀಗ ಪರಿಷತ್ ಹಣಾಹಣಿಯಲ್ಲಿನ ಸೋಲು ಜೆಡಿಎಸ್ ಪಕ್ಷಕ್ಕೆ ಭಾರೀ ಮುಖಭಂಗ ತರಿಸಿದ್ದರ ಜೊತೆಗೆ ದಳಪತಿಗಳ ಆಂತಕಕ್ಕೂ ಕಾರಣವಾಗಿದೆ.