ಬೆಂಗಳೂರು: ಎಸ್.ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಮಕ್ಕಳಿಗೂ ಸಹ ರಾಜ್ಯದ ಪ್ರತಿಷ್ಠಿತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿ.ಯು.ಸಿ ತರಗತಿ ಪ್ರವೇಶಾತಿ ದೊರೆಯುವಂತೆ ಸರ್ಕಾರ ನಿಯಮಾವಳಿ ರೂಪಿಸಿ ಸದರಿ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಕ್ರಮ ವಹಿಸಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು ‘ಕೇವಲ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ’ ಎಂದಿದ್ದಾರೆ. ಅನುದಾನಿತ, ಅನುದಾನರಹಿತ, ಖಾಸಗಿ ಮತ್ತು ಸರ್ಕಾರಿ ಸೇರಿದಂತೆ ಪ್ರತಿ ಪಿಯು ಕಾಲೇಜಿನಲ್ಲೂ SSLCಯಲ್ಲಿ ಕನಿಷ್ಠ 35 ಅಂಕಗಳೊಂದಿಗೆ ತೇರ್ಗಡೆಯಾದವರಿಗೆ ಕೂಡಾ ಪ್ರವೇಶ ಸಿಗುವಂತಾಬೇಕು. ಶೇಡಕಾ 35 ರಿಂದ 50 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶೇಕಡಾ 50 ರಷ್ಟು ಸೀಟುಗಳನ್ನು ಮೀಸಲಿಡಬೇಕು. ಶೇಕಡಾ 51 ರಿಂದ 75 ರಷ್ಟು ಅಂಕ ಪಡೆದವರಿಗೆ ಶೇಕಡಾ 25 ಸೀಟುಗಳನ್ನು ಮೀಸಲಿಡಬೇಕು. ಉಳಿದವುಗಳನ್ನು ಆಡಳಿತ ಮಂಡಳಿ ಬಯಸುವ ರೀತಿ ನೀಡಬಹುದು ಎಂದು ಸಲಹೆ ನೀಡಿದ್ದಾರೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಪಿಯು ಕಾಲೇಜುಗಳು ಪ್ರವೇಶ ನಿರಾಕರಿಸುತ್ತಿವೆ. ತಮ್ಮಲ್ಲಿ ಶೇಕಡಾ 94, 95 ರ ಮೇಲಿನವರಿಗಷ್ಟೇ ಪ್ರವೇಶ ಎನ್ನುತ್ತಿವೆ. ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೆಸರಾಂತ ಶಾಲೆಗಳಲ್ಲಿ ಕಲಿಯಬೇಕೆಂಬ ಮಕ್ಕಳು-ಪಾಲಕರ ಇಚ್ಛೆ ಈಡೇರದಂತಾಗಿದೆ ಎಂದು ಬಸವರಾಜ ಹೊರಟ್ಟಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿ ವಿಭಾಗದ ಕಾಲೇಜುಗಳಲ್ಲಂತೂ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ತಾವು ಶಿಕ್ಷಣ ಸಚಿವರಾಗಿದ್ದಾಗ ಕಾನೂನು ತಂದು ಕಡಿಮೆ ಅಂಕ ಪಡೆದವರಿಗೆ ಕೂಡ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶ ದೊರೆಯುವಂತೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಅಷ್ಟರಲ್ಲಿ ಸರ್ಕಾರದ ಅವಧಿ ಮುಗಿದಿದ್ದರಿಂದ ಈ ಉದ್ದೇಶ ಈಡೇರಿರಲಿಲ್ಲ ಎಂದು ಹೇಳಿರುವ ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಈ ರೀತಿ ಮಾಡಿದರೆ ರಾಜ್ಯದ ಎಲ್ಲಾ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ಕಾಲೇಜುಗಳಲ್ಲಿ ಪ್ರವೇಶ ದೊರೆತು ಇತರ ವಿದ್ಯಾರ್ಥಿಗಳೊಂದಿಗೆ ಜ್ಞಾನಾರ್ಜನೆ ಕೈಗೊಂಡು ಅತ್ಯುತ್ತಮ ಅಂಕ ಗಳಿಸುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡುವ ಕನಸನ್ನು ನನಸಾಗಿಸಿಕೊಳ್ಳಬಹುದುದೆಂದು ಅಭಿಪ್ರಾಯ ಪಟ್ಟಿದ್ದು, ಕೂಡಲೇ ಈ ಸಂಬAಧ ಸರ್ಕಾರ ಆದೇಶ ಹೊರಡಿಸಬೇಕು ಹಾಗೂ ಕೈಗೊಂಡ ಕ್ರಮದ ಬಗ್ಗೆ ತಮಗೆ ಮಾಹಿತಿ ನೀಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ಹೇಳಿದ್ದಾರೆ.




















































