ಸದ್ಯ ಕೊರೊನಾ ಮೂರನೇ ಅಲೆಗೆ ಮತ್ತೆ ತತ್ತರಿಸಿದೆ ಸಿನಿಮಾ ಇಂಡಸ್ಟ್ರಿ. ಡಿಸೆಂಬರ್ 28ರಿಂದ ಜಾರಿಯಾದ ಟಪ್ ರೂಲ್ಸ್ , ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ನಿಂದಾಗಿ ಡಿಸೆಂಬರ್ ಅಂತ್ಯ ಮತ್ತು ಜನವರಿಯಲ್ಲಿ ಬಿಡುಗಡೆ ಆಗಬೇಕಿದ್ದ ಬಹುತೇಕ ದೊಡ್ಡ ಚಿತ್ರಗಳು ಮುಂದೂಡಲ್ಪಟ್ಟಿದೆ. ಇನ್ನೂ ಕೆಲವು ಚಿತ್ರಗಳು ಓಟಿಟಿ ಪ್ಲಾಟ್ ಪಾರ್ಮ್ ನಂಬಿಕೊಂಡಿದೆ. ಆದರೆ ಸಣ್ಣದೊಂದು, ಸೀಮಿತ ಮಾರುಕಟ್ಟೆ ಹೊಂದಿರುವ ತುಳು ಚಿತ್ರರಂಗಕ್ಕೆ ಈ 50-50 ರೂಲ್ಸ್ ದೊಡ್ಡ ಆಘಾತವನ್ನೇ ನೀಡಿದೆ .
ಡಿಸೆಂಬರ್ ಕೊನೆಯಲ್ಲಿ ತೆರೆ ಕಂಡ ‘ಏರೆಗಾವುಯೇ ಕಿರಿಕಿರಿ..’ ಮತ್ತು ‘ಸೋಡಾ ಶರಬತ್’ ಚಿತ್ರಗಳಿಗೂ ಟಪ್ ರೂಲ್ಸ್ ದೊಡ್ಡ ಹೊಡೆತವನ್ನೇ ನೀಡಿದೆ. ಇನ್ನು ಜನವರಿ 31 ರವರೆಗೂ ಕೊರೊನಾದ ಕಠಿಣ ನಿಯಮ ಮುಂದುವರಿಯುವುದರಿಂದ ಅರ್ಜುನ್ ಕಾಪಿಕಾಡ್ ನಟನೆ ಮತ್ತು ನಿರ್ದೇಶನದ ‘ಅಬತರ’ ತುಳು ಚಿತ್ರ ಕೂಡ ಮುಂದಕ್ಕೆ ಹೋಗಿದೆ.
ಈ ನಡುವೆ, ಕಳೆದ ಒಂದೂವರೆ ವರ್ಷದಿಂದ ತುಳುವರು ಬಹು ನಿರೀಕ್ಷೆ ಇಟ್ಟುಕೊಂಡಿರುವ ಕಾಮಿಡಿ ಕಮಾಲ್ ಚಿತ್ರ ‘ಬೋಜರಾಜ್ MBBS’ ಮುಂದಿನ ತಿಂಗಳು ಫೆಬ್ರವರಿ 11ಕ್ಕೆ ಬಿಡುಗಡೆಯಾಗಲಿದೆಯಂತೆ. ಈ ಕುರಿತಂತೆ ಚಿತ್ರ ತಂಡವು ದಿನಾಂಕ ಅನೌನ್ಸ್ ಮಾಡಿದೆ. ಒಂದು ವೇಳೆ, ಬದಲಾದ ಪರಿಸ್ಥಿತಿಯಲ್ಲಿ ಟಪ್ ರೂಲ್ಸ್, 50-50 ನಿಯಮ, ಹಾಗೂ ನೈಟ್ ಕರ್ಪ್ಯೂ ಫೆಬ್ರವರಿಯಲ್ಲಿ ಮುಂದುವರಿದಲ್ಲಿ ‘ಬೋಜರಾಜ್ MBBS’ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎಂದಿದ್ದಾರೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ.
ಇನ್ನೊಂದೆಡೆ ಫೆಬ್ರವರಿಯಲ್ಲಿ ಲಾಕ್ದೌನ್ ಅಥವಾ ಟಪ್ ರೂಲ್ಸ್ ಅತ್ಯವಶ್ಯಕ ಎನ್ನುತ್ತದೆ ವೈದ್ಯಕೀಯ ಮೂಲ. ಹೀಗಾಗಿ ಯಾವುದೇ ಹೊಸ ಚಿತ್ರಗಳು ಫೆಬ್ರವರಿ ಬಿಡುಗಡೆಗೆ ದಿನಾಂಕ ಘೋಷಿಸುತ್ತಿಲ್ಲ .