ಚಿಕ್ಕಮಗಳೂರು: ರಾಜ್ಯದಲ್ಲಿರುವ ದೇಗುಲ ಹಾಗೂ ಶ್ರದ್ದಾ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿರುವುದು ಕುತೂಹಲಕಾರಿ ಬೆಳವಣಿಗೆ. ಇದೀಗ ಪುರಾಣ ಪ್ರಸಿದ್ಧ ಶೃಂಗೇರಿಯ ಶಾರದಾಂಬೆ ದೇವಾಲಯದಲ್ಲಿ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿರುವ ಆಡಳಿತ ಮಂಡಳಿ ನಡೆ ಕೂಡಾ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಒಂದು ವೇಳೆ ಭಾರತೀಯ ಉಡುಪುಗಳನ್ನಲ್ಲದೇ ಬೇರೆ ಉಡುಪುಗಳನ್ನು ಧರಿಸಿದರೆ ಒಳ ಭಾಗದಲ್ಲಿರುವ ಪರಿಕ್ರಮಕ್ಕೆ ಪ್ರವೇಶವಿರುವುದಿಲ್ಲ, ದೇವಾಲಯದಲ್ಲಿ ಅರ್ಧ ಮಂಟಪದಿಂದ ಹೊರಭಾಗದಲ್ಲಿ ನಿಂತು ದೇವರ ದರ್ಶನ ಪಡೆಯಬೇಕಾಗುತ್ತದೆ ಎಂದು ದೇವಾಲಯ ಹಾಗೂ ಶೃಂಗೇರಿ ಮಠದ ಆಡಳಿತಾಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ಎಲ್ಲಾ ದೇವಾಲಯಗಳಲ್ಲೂ ಈ ನಿಯಮ ಜಾರಿಗೆ ಬರಲಿ:
ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿರುವ ಶೃಂಗೇರಿ ಮಠದ ನಿರ್ಧಾರಕ್ಕೆ ಆಸ್ತಿಕ ವಲಯದಲ್ಲಿ ಸ್ವಾಗತ ವ್ಯಕ್ತವಾಗಿದೆ. ಎಲ್ಲಾ ದೇವಾಲಯಗಳಲ್ಲೂ ಈ ರೀತಿಯ ನಿಯಮ ಜಾರಿಗೆ ಬರಬೇಕಿದೆ ಎಂಬ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.