ಬೆಂಗಳೂರು: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಟ್ರಿನಿಟಿ ಚರ್ಚ್ ಆವರಣದಲ್ಲಿ ಬಾರ್ ಹಾಗೂ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿರುವುದು ಚರ್ಚ್‌ನ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಕ್ರೈಸ್ತ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚರ್ಚ್ ಆವರಣದಲ್ಲೇ ‘ಲುಮಾರಾ ಬಾರ್ ಅಂಡ್ ಕಿಚನ್’ ಹೆಸರಿನಲ್ಲಿ ಮದ್ಯ ಮಾರಾಟ ಹಾಗೂ ಡಾನ್ಸ್ ಬಾರ್ ನಡೆಯುತ್ತಿರುವುದರಿಂದ ಪ್ರಾರ್ಥನಾ ಕೈಂಕರ್ಯಕ್ಕೆ ಧಕ್ಕೆಯಾಗಿದೆ ಎಂಬ ಆರೋಪ ಪ್ರತಿಧ್ವನಿಸಿದೆ.
ಈ ಕುರಿತಂತೆ ಅಶೋಕನಗರ ನಿವಾಸಿ ಜ್ಞಾನ ರೂಬನ್ ಅವರ ಪರವಾಗಿ ಹಿರಿಯ ವಕೀಲ ಶಾಜಿ ಟಿ.ವರ್ಗೀಸ್ ಅವರು ರಾಜ್ಯ ಅಬಕಾರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅಬಕಾರಿ ಆಯುಕ್ತರು, ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಿಗೆ ಗುರುವಾರ ಲೀಗಲ್ ನೋಟೀಸ್ ನೀಡಿದ್ದಾರೆ. ಧಾರ್ಮಿಕ ಮತ್ತು ದತ್ತಿ ಸಂಸ್ಥೆಯಾದ ಚರ್ಚ್ ಆವರಣದಲ್ಲಿ ಬಾರ್‌ಗೆ ಪರವಾನಗಿ ನೀಡಿರುವುದು ಗಂಭೀರ ಲೋಪ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಟ್ರಿನಿಟಿ ಚರ್ಚ್ ಕರ್ನಾಟಕ ಸೆಂಟ್ರಲ್ ಡಯಾಸಿಸ್ (KCD) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಚರ್ಚ್ ಆಫ್ ಸೌತ್ ಇಂಡಿಯಾದ ಅಂಗಸಂಸ್ಥೆಯಾಗಿದೆ. ಲಾಭರಹಿತ ಧಾರ್ಮಿಕ ಸಂಸ್ಥೆಯಾಗಿರುವ ಈ ಚರ್ಚ್‌ನ ಆಸ್ತಿಗಳನ್ನು ರಕ್ಷಿಸುವ ಹೊಣೆ CSITAಗೆ ಸೇರಿದೆ. ಆದರೆ, ಚರ್ಚ್ ಆವರಣದಲ್ಲಿರುವ ಕಟ್ಟಡವನ್ನು ಗುತ್ತಿಗೆಗೆ ಪಡೆದುಕೊಂಡ ಪೋತ್ರಾಜ್ ಇನ್ಫ್ರಾಸ್ಟ್ರಕ್ಚರ್ ಮತ್ತು ಇನ್ವೆಸ್ಟ್ಮೆಂಟ್ ಸಂಸ್ಥೆಯು ಅದನ್ನು ಪಬ್ ಹಾಗೂ ಡ್ಯಾನ್ಸ್ ಬಾರ್ ಆಗಿ ಪರಿವರ್ತಿಸಿರುವುದು ಪಾವಿತ್ರ್ಯಕ್ಕೆ ಧಕ್ಕೆಯಾಗುವಂತದ್ದು ಎಂದು ಆರೋಪಿಸಲಾಗಿದೆ.
ನೋಟೀಸ್ ಪ್ರಕಾರ, ಟ್ರಿನಿಟಿ ವೃತ್ತದ ಬಳಿಯ ಚರ್ಚ್ ಕಾಂಪ್ಲೆಕ್ಸ್‌ನ 4ನೇ ಮಹಡಿಯಲ್ಲಿ ‘ಲುಮಾರಾ ಬಾರ್’ ಹೆಸರಿನಲ್ಲಿ ಮಹಿಳೆಯರೊಂದಿಗೆ ಮದ್ಯ ಸೇವನೆ ಹಾಗೂ ನೃತ್ಯ ನಡೆಯುತ್ತಿದೆ. 2024 ಜುಲೈ 18ರಂದು ಪರವಾನಗಿ ಪಡೆದು, ‘ಹೌಸ್ ಆಫ್ ಪಾಕಶಾಲೆ ಆರ್ಟ್ ಹಾಸ್ಪಿಟಾಲಿಟಿ LLP’ ಸಂಸ್ಥೆ ಈ ಬಾರ್–ರೆಸ್ಟೋರೆಂಟ್ ನಡೆಸುತ್ತಿದೆ ಎಂದು ಹೇಳಲಾಗಿದೆ.
ಪ್ರಾರ್ಥನಾ ಮಂದಿರದ ಆವರಣದಲ್ಲಿ ಲಿಕ್ಕರ್ ವ್ಯವಹಾರ ನಡೆಸಬಾರದು ಎಂದು ಬೆಂಗಳೂರು ನ್ಯಾಯಾಲಯವು 2025 ಜನವರಿ 27ರಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದರೂ, ಅದರ ಉಲ್ಲಂಘನೆ ನಡೆಯುತ್ತಿದೆ ಎಂದು ನೋಟೀಸ್‌ನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ನ್ಯಾಯಾಲಯದ ಆದೇಶದ ಬಳಿಕವೂ ಬಾರ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರು ನೀಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚರ್ಚ್ ಸದಸ್ಯರು ಆರೋಪಿಸಿದ್ದಾರೆ.
ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 29ರ ಅಡಿಯಲ್ಲಿ ಪರವಾನಗಿಯನ್ನು ಅಮಾನತು ಅಥವಾ ರದ್ದುಗೊಳಿಸುವ ಅಧಿಕಾರ ಅಬಕಾರಿ ಇಲಾಖೆಗೆ ಇದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರ ಪಾತ್ರದ ಬಗ್ಗೆಯೂ ನೋಟೀಸಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.
ಚರ್ಚ್ ಆವರಣದಲ್ಲಿ ಜೋರಾದ ಸಂಗೀತ, ಮದ್ಯ ಮಾರಾಟದಿಂದ ಅನೈತಿಕತೆ, ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗುತ್ತಿದೆ. ಈ ಬಾರ್ & ರೆಸ್ಟೋರೆಂಟ್ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಪ್ರಾಣ ಬ್ರದರಿಕೆ ಒಡ್ಡಲಾಗುತ್ತದೆ ಎಂದು ವಕೀಲರು ಆರೋಪ ಮಾಡಿದ್ದಾರೆ. ಧಾರ್ಮಿಕ ಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಲುಮಾರಾ ಬಾರ್ ಮತ್ತು ರೆಸ್ಟೋರೆಂಟ್ ಕಾರ್ಯಾಚರಣೆಯನ್ನು ತಕ್ಷಣ ನಿಷೇಧಿಸಬೇಕು ಹಾಗೂ ಸಂಪೂರ್ಣ ತನಿಖೆ ನಡೆಸಬೇಕು ಎಂದು ವಕೀಲ ಶಾಜಿ ಟಿ.ವರ್ಗೀಸ್ ಅವರು ತಮ್ಮ ನೋಟೀಸಿನಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಟ್ರಿನಿಟಿ ಚರ್ಚ್ ಸಿಬ್ಬಂದಿ, ತಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದಿದ್ದಾರೆ.



















































