ಮಂಗಳೂರು: ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ದಕ್ಷಿಣಕನ್ನಡದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ತರಲು ವಕೀಲರ ಸಂಘಟನೆಗಳು ಪ್ರಯತ್ನಕ್ಕಿಳಿದಿವೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಅಖಾಡಕ್ಕೆ ಧುಮುಕಲು ಸಜ್ಜಾಗಿರುವ ವಕೀಲರ ಸಮುದಾಯ, ಈ ಸಂಬಂಧ ಕಾರ್ಯತಂತ್ರ ರೂಪಿಸಲು ಗುರುವಾರ (ಏಪ್ರಿಲ್ 4) ಮಹತ್ವದ ಸಭೆ ಕರೆದಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪದ್ಮರಾಜ್ ರಾಮಯ್ಯ ಅವರು ವಕೀಲರಾಗಿರುವುದರಿಂದ ಅವರ ಪರವಾಗಿ ವಕೀಲರ ಸಮೂಹ ಪ್ರಚಾರ ಕೈಗೊಳ್ಳಲು ಮುಂದಾಗಿದೆ. ಮಾಜಿ ಸರ್ಕಾರಿ ಅಭಿಯೋಜಕರೂ ಆಗಿರುವ ಆರ್. ಮನೋರಾಜ್ ಅವರು ನ್ಯಾಯವಾದಿಗಳ ನೇತೃತ್ವ ವಹಿಸಿದ್ದು, ಅವರ ಮುಂದಾಳುತ್ವದಲ್ಲೇ ಗುರುವಾರದ ಸಭೆ ನಡೆಯಲಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ( DKDCC) ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗದ ಅಧ್ಯಕ್ಷರಾದ ಆರ್. ಮನೋರಾಜ್, 04-04-2024 ರಂದು ಸಂಜೆ 4:30 ಕ್ಕೆ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್’ನಲ್ಲಿ ವಕೀಲರ ಮಹತ್ವದ ಸಭೆ ನಡೆಯಲಿದ್ದು ನ್ಯಾಯಾಂಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ವಕೀಲರು ಅಮೂಲ್ಯವಾದ ಸಲಹೆಗಳನ್ನು ಮತ್ತು ನ್ಯಾಯಾಂಗ ಬಂಧುತ್ವ ಹಾಗೂ ಸಾರ್ವಜನಿಕರ ಏಳಿಗೆ ಸಂಬಂಧ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂದವರು ವಿವರಿಸಿದ್ದಾರೆ.