ಚಿತ್ರದುರ್ಗ:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಮ್ಮದೇ ಶೈಲಿಯಲ್ಲಿ ಎದಿರೇಟು ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಪರಾಧ ಫ್ರಕರಣಗಳ ಅಂಕಿ ಅಂಶ ಒದಗಿಸಿದರು. ಬಿಜೆಪಿ ಸರ್ಕಾರವಿದ್ದಾಗ 1350ಕ್ಕೂ ಹೆಚ್ಚು ಕೊಲೆಗಳಾಗಿವೆ ಎಂದು ಬೊಟ್ಟು ಮಾಡಿದ ಸಾರಿಗೆ ಸಚಿವರು, ಬಿಜೆಪಿ ಅವಧಿಯಲ್ಲಿನ 1350 ಕೊಲೆಗಳ ಸಂಖ್ಯೆ ಹೆಚ್ಚೋ ಅಥವಾ ಕಾಂಗ್ರೆಸ್ ಸರ್ಕಾರದ ಅವಧಿಯದ್ದೆಂದು ಬಿಜೆಪಿ ನಾಯಕರು ಹೇಳುತ್ತಿರುವ 400ರ ಸಂಖ್ಯೆ ಹೆಚ್ಚೋ ಎಂದು ಪ್ರಶ್ನಿಸಿದರು.
ಇದೇ ವೇಳೆ, ಪೆನ್ ಡ್ರೈವ್ ಕೇಸ್‌ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಙಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ, ಶಿವರಾಮೇಗೌಡ, ದೇವಾರಾಜೇಗೌಡರ ವೈಯಕ್ತಿಕ ಕಿತ್ತಾಟದಿಂದಾಗಿ ಪೆನ್ ಡ್ರೈವ್ ಅವಾಂತರ ಸೃಷ್ಟಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಹೊಳೆನರಸೀಪುರದಲ್ಲಿ ಇರಬೇಕಿದ್ದ ಜಗಳ ರಾಜ್ಯ ಮಟ್ಟಕ್ಕೆ ಬಂದಿದೆ. ಸರ್ಕಾರಕ್ಕೆ, ಪೆನ್ ಡ್ರೈವ್ ಗೂ, ಡಿಕೆಶಿ ಯಾವ ಸಂಬಂಧ ಇಲ್ಲ ಎಂದವರು ಪುನರುಚ್ಚರಿಸಿದರು.