ಬೆಂಗಳೂರು: ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತು ಸ್ಪಂದಿಸಲು ನೆರವಾಗಲು “ಅಪಘಾತ ತುರ್ತು ಸ್ಪಂದನ ವಾಹನ” (Accident Emergency Response Vehicle) ಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವರು, ನಿಗಮದ ಬಸ್ಸುಗಳು ಮಾರ್ಗ ಮಧ್ಯೆ ಅಪಘಾತಕ್ಕೀಡಾದಾಗ ಅಥವಾ ತಾಂತ್ರಿಕ ದೋಷದಿಂದ ನಿಂತುಹೋದಾಗ, ಅವುಗಳನ್ನು ಶೀಘ್ರವಾಗಿ ದುರಸ್ತಿ ಮಾಡಲು ಈ ವಾಹನಗಳನ್ನು ಮೊಬೈಲ್ ವರ್ಕ್‌ಶಾಪ್ ಮಾದರಿಯಲ್ಲಿ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಎರಡು ಅಪಘಾತ ತುರ್ತು ಸ್ಪಂದನ ವಾಹನಗಳನ್ನು ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ ನಿಯೋಜಿಸಲಾಗುತ್ತದೆ. ಇದರ ಮೂಲಕ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮೈಸೂರು, ಮಂಡ್ಯ ಭಾಗಗಳಲ್ಲಿ ಸಂಭವಿಸುವ ಅಪಘಾತ ಮತ್ತು ಅವಘಡಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗಲಿದೆ.
ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಅಂತರರಾಜ್ಯಗಳಿಗೆ ನಾನಾ ಮಾದರಿಯ ಬಸ್ಸುಗಳು ಸಂಚರಿಸುತ್ತಿವೆ. ಇವು ಮಾರ್ಗ ಮಧ್ಯೆ ತಾಂತ್ರಿಕ ದೋಷದಿಂದ ನಿಂತಾಗ ಉಂಟಾಗುವ ಟ್ರಾಫಿಕ್ ಸಮಸ್ಯೆ ಹಾಗೂ ಪ್ರಯಾಣಿಕರ ತೊಂದರೆ ನಿವಾರಣೆಗೆ ಈ ತುರ್ತು ಸ್ಪಂದನ ವಾಹನಗಳು ಸಹಕಾರಿಯಾಗಲಿವೆ.
ಅಪಘಾತ ಅಥವಾ ಅವಘಡದ ಸಂದರ್ಭಗಳಲ್ಲಿ ತಾಂತ್ರಿಕ ಸಿಬ್ಬಂದಿ ಅಗತ್ಯ ಬಿಡಿಭಾಗಗಳು ಹಾಗೂ ಉಪಕರಣಗಳೊಂದಿಗೆ ತಕ್ಷಣ ಸ್ಥಳಕ್ಕೆ ತೆರಳಿ ಬಸ್ಸುಗಳನ್ನು ದುರಸ್ತಿಗೊಳಿಸಲು ಈ ವಾಹನಗಳನ್ನು ಬಳಸಲಾಗುತ್ತದೆ. ಜೊತೆಗೆ, ಅಪಘಾತಕ್ಕೀಡಾದ ಬಸ್ಸಿನ ಚಾಲಕ–ನಿರ್ವಾಹಕರಿಗೆ ತಕ್ಷಣ ಸಹಾಯ ಒದಗಿಸುವುದರ ಜೊತೆಗೆ, ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಈ ವಾಹನಗಳು ಉಪಯುಕ್ತವಾಗಲಿವೆ.
ಪ್ರತಿ ಅಪಘಾತ ತುರ್ತು ಸ್ಪಂದನ ವಾಹನದ ವೆಚ್ಚ ರೂ. 7.22 ಲಕ್ಷ ಆಗಿದೆ. 2026ರ ಜನವರಿ ಅಂತ್ಯದೊಳಗೆ ಹೆಚ್ಚುವರಿಯಾಗಿ 10 ಹೊಸ ವಾಹನಗಳನ್ನು ಸೇರ್ಪಡೆಗೊಳಿಸಿ, ಅವುಗಳನ್ನು ಹಂತ ಹಂತವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೆ ನಿಯೋಜಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಉದ್ದೇಶಕ್ಕಾಗಿ Ashok Leyland DOST XL High Side Deck – BS-VI ಮಾದರಿಯ ವಾಹನಗಳನ್ನು ಖರೀದಿಸಲಾಗಿದ್ದು, ಇವು ಟರ್ಬೋ ಚಾರ್ಜ್ಡ್ ಮತ್ತು ಇಂಟರ್‌ಕೂಲ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, ಕಡಿಮೆ ಮಾಲಿನ್ಯ ಹೊರಸೂಸುವ ವ್ಯವಸ್ಥೆ, ಉತ್ತಮ ಇಂಧನ ದಕ್ಷತೆ ಹಾಗೂ ಹೆಚ್ಚಿನ ಸರಕು ಸಾಗಣೆ ಸಾಮರ್ಥ್ಯವನ್ನು ಒಳಗೊಂಡಿವೆ.
ಕಾರ್ಯಕ್ರಮದಲ್ಲಿ ವಾ.ಕ.ರ.ಸಾ. ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಅಲಗೌಡ ಕಾಗೆ, ಕ.ಕ.ರ.ಸಾ. ನಿಗಮದ ಅರುಣ್ ಕುಮಾರ್ ಎಂ.ವೈ. ಪಾಟೀಲ, ಬೆಂ.ಮ.ಸಾ. ಸಂಸ್ಥೆಯಾ ವಿ.ಎಸ್. ಆರಾಧ್ಯ, ಕರಾರಸಾ ನಿಗಮದ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಬಿ ಎಂ ಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಎಂ, ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ,, ಬೆಂ.ಮ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ., ವಾ.ಕ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ, ಕ.ಕ.ರ.ಸಾ. ನಿಗಮವ್ಯವಸ್ಥಾಪಕ ನಿರ್ದೇಶಕರಾದ ಡಾ|| ಸುಶೀಲಾ ಬಿ. ಮೊದಲಾದವರು ಉಪಸ್ಥಿತರಿದ್ದರು.






















































