ಮಹಿಳೆಯ ಭೀಕರ ಹತ್ಯೆ : ಚಿನ್ನಾಭರಣಕ್ಕಾಗಿ ಕೊಲೆಗೈದ ಶಂಕೆ…! ಪೊಲೀಸ್ ತನಿಖೆಗೆ ಸವಾಲಾದ ಪ್ರಕರಣ
ಉಡುಪಿ : ಬ್ರಹ್ಮಾವರ ಸಮೀಪ ಕುಮ್ರಗೋಡಿನ ಅಪಾರ್ಟ್ಮೆಂಟ್ ವೊಂದರಲ್ಲಿ ಮಹಿಳೆಯೋರ್ವಳನ್ನು ಭೀಕರವಾಗಿ ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದ ಮಹಿಳೆ ಗಂಗೊಳ್ಳಿ ಮೂಲದ ವಿಶಾಲ ಗಾಣಿಗ (35) ಎಂದು ಗುರುತಿಸಲಾಗಿದೆ.
ವಿಶಾಲ ಅವರು ಗಂಡನೊಂದಿಗೆ ವಿದೇಶದಲ್ಲಿ ವಾಸವಾಗಿದ್ದರು. ಈಕೆ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಆಗಮಿದ್ದರು. ತಂದೆ ಹಾಗೂ ಮಗಳ ಜೊತೆ ಸೋಮವಾರ ಗಂಗೊಳ್ಳಿಯ ಮನೆಗೆ ಹೋಗಿದ್ದು ತನಗೆ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ಬ್ರಹ್ಮಾವರಕ್ಕೆ ವಾಪಸಾಗಿದ್ದರು. ಕೆಲಸ ಮುಗಿಸಿ ಗಂಗೊಳ್ಳಿ ಮನೆಗೆ ಬರುವೆ ಎಂದು ತಿಳಿಸಿ ರಿಕ್ಷಾ ಎರಿದ್ದಾರೆ. ಆದರೆ ಸಂಜೆಯಾದರೂ ಮಗಳು ಮನೆಗೆ ಬಾರದ ಕಾರಣ ಹಾಗೂ ಪೋನ್ ಕೂಡ ರಿಸೀವ್ ಮಾಡದಿರುವುದರಿಂದ ಭಯಗೊಂಡು ತನ್ನ ಇನ್ನೋರ್ವ ಮಗಳೊಂದಿಗೆ ವಿಶಾಲ ಅವರನ್ನು ಹುಡುಕಿಕೊಂಡು ಬ್ರಹ್ಮಾವರಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಗಳು ಅಪಾರ್ಟ್ಮೆಂಟ್‌ನ ರೂಮ್‌ನಲ್ಲಿ ಕುತ್ತಿಗೆಗೆ ವಯರ್ ಬಿಗಿದ ಸ್ಥಿತಿಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ವಿಶಾಲ ಗಾಣಿಗ ಅವರು ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಘಟನೆ ನಡೆದಿದೆ ಎನ್ನಲಾಗಿದೆ. ಚಿನ್ನಾಭರಣಕ್ಕಾಗಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ. ಈ ಕೊಲೆ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ ಆನಂತಪದ್ಮನಾಭ, ಠಾಣಾಧಿಕಾರಿ ಗುರುನಾಥ್ ಹಾಡಿಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಾವರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























































