ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಿರುವ 50 ಅಂತರ ನಗರ ಹವಾನಿಯಂತ್ರಿತ “EV ಪವರ್ ಪ್ಲಸ್” ವಿದ್ಯುತ್ ಚಾಲಿತ ವಾಹನಗಳ ಪೈಕಿ ಮೊದಲ ಹಂತವಾಗಿ ಇಂದು 25 ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಈ ಬಸ್ಸುಗಳ ಲೋಕಾರ್ಪಣೆ ಸನ್ನಿವೇಶ ಗಮನಸೆಳೆಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು, KSRTCಯ ನೂತನ ಅಂತರ ನಗರ ಹವಾ ನಿಯಂತ್ರಿತ “EV ಪವರ್ ಪ್ಲಸ್” ವಾಹನಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ಕೆಲವು ದಿನಗಳ ಹಿಂದೆಯಷ್ಟೆ KSRTC ನಿಗಮವು ತನ್ನ ವಾಹನ ಬಲಕ್ಕೆ ಸ್ಕ್ಯಾಂಡಿನೇವಿಯನ್ ಯೂರೋಪಿಯನ್ ವಿನ್ಯಾಸದ ವೋಲ್ವೋ-9600s “ಅಂಬಾರಿ ಉತ್ಸವ” ವಾಹನವನ್ನು ಸಾರ್ವಜನಿಕ ಬಳಕೆಗಾಗಿ ಲೋಕಾರ್ಪಣೆ ಮಾಡಲಾಗಿತ್ತು. ಇದೀಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳ ಕಾರ್ಯಾಚರಣೆಗೆ ಯೋಜಿಸಿದ್ದು, ಈ ಪೈಕಿ 25 ವಾಹನಗಳನ್ನು ಸೇರ್ಪಡೆ ಮಾಡಲಾಗಿದೆ. ಸದ್ಯವೇ ಮತ್ತಷ್ಟು ಬಸ್ಸುಗಳನ್ನು ಕಾರ್ಯಾಚರಣೆಗೆ ಇಳಿಸಲು ತಯಾರಿ ನಡೆದಿದೆ.
ನಿಗಮವು ತನ್ನ ವಿದ್ಯುತ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ ‘EV ಪವರ್ ಪ್ಲಸ್’ ಟ್ಯಾಗ್ ಲೈನ್ ‘ಅತ್ಯುತ್ತಮ ಅನುಭವ’, ‘EV Power Plus’ – e-Xperience e-levated’ ಎಂದು ಹೆಸರಿಸಲಾಗಿದೆ .
ನಿಗಮವು PROTO-TYPE ವಿದ್ಯುತ್ ವಾಹನಕ್ಕೆ ದಿನಾಂಕ 31.12.2022 ರಂದು ಚಾಲನೆ ನೀಡಿದ್ದು, ವಾಹನವನ್ನು ಬೆಂಗಳೂರು – ಮೈಸೂರು ನಡುವೆ ಪ್ರಾಯೋಗಿಕವಾಗಿ ಕಾರ್ಯಾಚರಣೆ ಮಾಡಿರುತ್ತದೆ. ಈ ಪ್ರಾಯೋಗಿಕ ಕಾರ್ಯಾಚರಣೆಯು ಅತಿ ಯಶಸ್ವಿದಾಯಕವಾಗಿರುತ್ತದೆ. ಪ್ರಸ್ತುತ ಉದ್ಘಾಟಿಸಲಾಗುತ್ತಿರುವ ವಾಹನಗಳನ್ನು ಈ ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ.
- ಬೆಂಗಳೂರು – ಮೈಸೂರು
- ಬೆಂಗಳೂರು – ಮಡಿಕೇರಿ
- ಬೆಂಗಳೂರು – ವಿರಾಜಪೇಟೆ
- ಬೆಂಗಳೂರು- ದಾವಣಗೆರೆ
- ಬೆಂಗಳೂರು- ಶಿವಮೊಗ್ಗ
- ಬೆಂಗಳೂರು – ಚಿಕ್ಕಮಗಳೂರು
ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಾಪಿಸಲಾಗಿದ್ದು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಗರಗಳಲ್ಲಿ ಸ್ಥಾಪಿಸಲಾಗುತ್ತಿದ್ದು, ಕಾರ್ಯವು ಪ್ರಗತಿಯಲ್ಲಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
‘EV ಪವರ್ ಪ್ಲಸ್’ ಬಸ್‌ನ ವೈಶಿಷ್ಟ್ಯಗಳು ಹೀಗಿವೆ:
-
ಈ ಬಸ್ 12 ಮೀಟರ್ ಉದ್ದವಿದ್ದು ವಿಶಿಷ್ಟ ಸೌಕರ್ಯ ಹೊಂದಿದೆ.
-
ಈ ವಾಹನವು ಪ್ರತಿ ಚಾರ್ಚಗೆ 300 ಕಿ.ಮೀ ಕ್ರಮಿಸಲಿದೆ. ಸುಧಾರಿತ Li-ion Phosphate Battery ಹೊಂದಿರುವ ಇದು 2-3 ಗಂಟೆಗಳಲ್ಲಿ ಫಾಸ್ಟ ಚಾರ್ಚಿಂಗ್ ಮೂಲಕ ಸಂಪೂರ್ಣವಾಗಿ ರೀಚಾರ್ಚ್ ಮಾಡಬಹುದಾಗಿರುತ್ತದೆ.
-
ಚಾಲಕರು, ನಿರ್ವಾಹಕರು ಸೇರಿದಂತೆ 45 ಆಸನಗಳನ್ನು ಹೊಂದಿರುತ್ತದೆ.
-
ಬಸ್ಸಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳು, ಎಮರ್ಜೆನ್ಸಿ ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮ್ಮರ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
-
ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಹಂತ – ಹಂತವಾಗಿ 350 ವಿದ್ಯುತ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ.
-
ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೂ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ.
EV ಪವರ್ ಪ್ಲಸ್” ಬಸ್‌ಗಳ ಲೋಕಾರ್ಪಣೆ ಸಂದರ್ಭದಲ್ಲಿ KSRTC ಉಪಾಧ್ಯಕ್ಷರಾದ ಮೋಹನ್ ಬಿ ಮೆಣಸಿನಕಾಯಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ನಿರ್ದೇಶಕರು (ಸಿ ಮತ್ತು ಜಾ) ಪ್ರಶಾಂತ್ ಕುಮಾರ್ ಮಿಶ್ರ, ಮಂಡಳಿ ನಿರ್ದೇಶಕರಾದ ಪಿ. ರುದ್ರೇಶ್, ಆರುಂಡಿ ನಾಗರಾಜ, ರಾಜು ವಿಠಲಸಾ ಜರತಾರಘರ, ವೀರೇಂದ್ರ ಶೆಟ್ಟರ್ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರನೇಕರು ಉಪಸ್ಥಿತರಿದ್ದರು.
ಬರೋಬ್ಬರಿ 26 ಲಕ್ಷ ಪ್ರಯಣಿಕರ ರಥ..!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 7400 ಅನುಸೂಚಿಗಳಿಂದ 27 ಲಕ್ಷ ಕಿ.ಮೀ ಕ್ರಮಿಸುವುದರ ಮೂಲಕ 26 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ನಿಗಮವು ಪ್ರತಿ ದಿನ ರೂ.9.5 ಕೋಟಿ ಆದಾಯ ಗಳಿಸುತ್ತಿದೆ.