ನವದೆಹಲಿ: ಸಾರ್ವಜನಿಕ ಉದ್ದಿಮೆಗಳೆಂದರೆ ಉತ್ಕೃಷ್ಟತೆ ಮರೀಚಿಕೆ ಎಂಬ ಮಾತಿದೆ. ಆದರೆ ಈ ಅಭಿಪ್ರಾಯಕ್ಕೆ ಅಪವಾದ ಎಂಬಂತೆ ಕರ್ನಾಟಕ ಸರ್ಕಾರದ ಸಾರಿಗೆ ಸಂಸ್ಥೆ ತನ್ನ ಅತ್ಯುತ್ತಮ ಸೇವೆ ಮೂಲಕ ದೇಶದ ಗಮನಕೇಂದ್ರೀಕರಿಸಿದೆ. ಈ ಉತ್ಕೃಷ್ಟತೆಗಾಗಿ ಸರಣಿ ಪ್ರಶಸ್ತಿಗಳು ಸಾಲು ಸಾಲಾಗಿ KSRTC ಬತ್ತಳಿಕೆ ಸೇರುತ್ತಿದೆ.
ಪ್ರಶಸ್ತಿ ಬೇಟೆಯ ಸವಾರಿಯನ್ನು ಮುಂದುವರಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಪ್ರತಿಷ್ಠಿತ Governance now PSU IT ರಾಷ್ಟ್ರೀಯ ಪುರಸ್ಕಾರವನ್ನು ಪಡೆದುಕೊಂಡಿದೆ. ರಾಮಲಿಂಗ ರೆಡ್ಡಿ ಅವರು ಸಾರಿಗೆ ಸಚಿವರಾದ ನಂತರ ಕೆಎಸ್ಸಾರ್ಟಿಸಿಗೆ ಸರಣಿ ಪ್ರಶಸ್ತಿಗಳು ಒಲಿಯುತ್ತಿವೆ.
Governance Now ವತಿಯಿಂದ ನವದೆಹಲಿಯಲ್ಲಿ ಗುರುವಾರ ಆಯೋಜಿತವಾದ ಸಮಾರಂಭದಲ್ಲಿ KSRTCಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿಗಮವು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಸಹಾಯಕ್ಕಾಗಿ ಜಾರಿ ಮಾಡಿರುವ ವಿನೂತನ ವಿದ್ಯಾ ಚೇತನ ಆನ್ಲೈನ್ ಉಪಕ್ರಮಕ್ಕಾಗಿ Digital Accessibility and Inclusion ಪ್ರಶಸ್ತಿ ನೀಡಲಾಗಿದೆ.
ಉತ್ತರ ಪ್ರದೇಶದ ನಿವೃತ್ತ ಡಿಜಿಪಿ, ಡಾ. ವಿಕ್ರಮ್ ಸಿಂಗ್, ವಕ್ತಾರರಾ ಚಾರು ಪ್ರಜ್ಞಾ ಮತ್ತು ಎಂಟರ್ಪ್ರೈಸಸ್ ಮುಖ್ಯಸ್ಥ ಕೈಲಾಸನಾಥ ಅಧಿಕಾರಿ, ಅವರು ಕೆಎಸ್ಸಾರ್ಟಿಸಿ ಅಧಿಕಾರಿಗಳ ಸಮೂಹಕ್ಕೆ ಪ್ರಶಸ್ತಿ ನೀಡಿ ಗೌರವಿಸಿದರು. ಕೆಎಸ್ಸಾರ್ಟಿಸಿಯ ಮುಖ್ಯ ಕಾಮಗಾರಿ ಅಭಿಯಂತರ ಶಿವಕುಮಾರ್ ಹಾಗೂ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ, ಅಶೋಕ ಕುಮಾರ್ ಅವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.