ಬೆಂಗಳೂರು: ಯಾರೇ ಆಗಿ ಏನೇ ಆಗಲಿ ಲೋಕಹಿತದ ಕ್ರಮ ಜಾರಿಯಾದರೆ ಅದು ಜನರಿಗೆ ಒಳಿತು. ಆದರೆ ಈ ವಿಚಾರದಲ್ಲಿ ಕೆಸರೆರಚಾಟ ಸರಿಯೇ ಎಂಬುದು ಕೆಎಸ್ಸಾರ್ಟಿಸಿ ಮಂದಿಯ ಅಭಿಮತ.
ಪ್ರಸ್ತುತ ರಾಜ್ಯ ಸರ್ಕಾರವು ರಾಜ್ಯದ ಪ್ರತಿಷ್ಠಿತ ಸಾರಿಗೆ ಸಂಸ್ಥೆ KSRTC ನೌಕರರಿಗಾಗಿ ಒಂದು ಕೋಟಿ ವಿಮೆ ಜಾರಿಗೆ ತಂದಿದೆ. ಕೆಲವು ದಿನಗಳ ಹಿಂದಷ್ಟೇ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಈ ಯೋಜನೆ ಜಾರಿಗೆ ಹಸಿರಿ ನಿಶಾನೆ ತೋರಿದ್ದು, ಸಾಂಕೇತಿಕವಾಗಿ ಚೆಕ್ ವಿತರಿಸಿ ಗಮನಸೆಳೆದಿದ್ದರು. ಆದರೆ ಈ ಯೋಜನೆ ವಿಚಾರದಲ್ಲಿ ಈಗಿನ ಸರ್ಕಾರ ಹಾಗೂ ಈ ಯೋಜನೆ ಜಾರಿಯ ಪ್ರಕ್ರಿಯೆ ಆರಂಬಿಸಿದ್ದ ಹಿಂದಿನ ಸರ್ಕಾರದಲ್ಲಿದ್ದ ಮಂದಿಯ ನಡುವೆ ಕೆಸರೆರಚಾಟ ಆರಂಭವಾಗಿದೆ.
ಬಿಜೆಪಿ ಆಕ್ರೋಶ:
ಸಾರಿಗೆ ನೌಕರರಿಗೆ ಒಂದು ಕೋಟಿ ರೂಪಾಯಿಗಳ ವಿಮೆ ಸೇವೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದದ್ದು ನಮ್ಮ ಸರ್ಕಾರ ಎಂದು ಬಿಜೆಪಿ ಹೇಳಿದೆ. ಸುಳ್ಳು ಇತಿಹಾಸ ಬೋಧಿಸಿ ಅಭ್ಯಾಸವಿರುವ ಕಾಂಗ್ರೆಸ್ ಪಕ್ಷವು ತನ್ನ ಚಾಳಿ ಮುಂದುವರಿಸಿ ಅದನ್ನು ತನ್ನದು ಎಂದು ಹೇಳಿಕೊಳ್ಳುತ್ತಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ನಮ್ಮ ಯೋಜನೆಗಳಿಗೆ ನಿಮ್ಮ ಫೋಟೋ ಹಾಕಿದ್ದು ಸಾಕು. ಹೇಳಿಕೊಳ್ಳಲು ನಿಮ್ಮ ಸಾಧನೆ ಏನಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ಯೋಜನೆಗೆ ಕಾಂಗ್ರೆಸ್ ಸ್ಟಿಕ್ಕರ್ ಅಂಟಿಸಿದೆ ಎಂದು ಲೇವಡಿ ಮಾಡಿದೆ.
ಸಾರಿಗೆ ನೌಕರರಿಗೆ ಒಂದು ಕೋಟಿ ರೂಪಾಯಿಗಳ ವಿಮೆ ಸೇವೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದದ್ದು ನಮ್ಮ ಸರ್ಕಾರ.
ಸುಳ್ಳು ಇತಿಹಾಸ ಬೋಧಿಸಿ ಅಭ್ಯಾಸವಿರುವ @INCKarnataka ತನ್ನ ಚಾಳಿ ಮುಂದುವರಿಸಿ ಅದನ್ನು ತನ್ನದು ಎಂದು ಹೇಳಿಕೊಳ್ಳುತ್ತಿದೆ. @siddaramaiah ರವರೇ, ನಮ್ಮ ಯೋಜನೆಗಳಿಗೆ ನಿಮ್ಮ ಫೋಟೋ ಹಾಕಿದ್ದು ಸಾಕು.… https://t.co/xbP9rLPc6Y pic.twitter.com/58LOnMxKn0
— BJP Karnataka (@BJP4Karnataka) July 19, 2023
ಈ ರಾಜಕೀಯ ಜಟಾಪಟಿ ಬಗ್ಗೆ ಅಸಮಾಧಾನ ಹೊರಹಾಕಿರುವ ಕೆಎಸ್ಸಾರ್ಟಿಸಿ ನೌಕರರು, ಯೋಜನೆ ಯಾರದ್ದಾದರೇನು? ಲೋಕಹಿತವಾದರೆ ಜನರಿಗೆ ಒಳಿತವಲ್ಲವೇ? ಎಂದು ಅಭಿಪ್ರಾಯ ಪಟ್ಟಿದ್ದಾರೆ.