ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಇಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕೆಎಸ್ಸಾರ್ಟಿಸಿ ಚಾಲಕರ ಮಗನಾದ ಹೆಚ್.ಎಸ್.ಸಾಕ್ಷಾತ್ ರವರ ಕ್ರೀಡಾ ಸಾಧನೆಗಾಗಿ ಪ್ರತಿಷ್ಠಿತ ‘ಏಕಲವ್ಯ’ ಪ್ರಶಸ್ತಿ ಕಿರೀಟ ಸಿಕ್ಕಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರಿಗೆ ನಿಗಮದ ವತಿಯಿಂದ ಸನ್ಮಾನಿಸಲಾಯಿತು.
ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ.ವಿ.ಅನ್ಬುಕುಮಾರ್ ಅವರು ಸಾಕ್ಷಾತ್‌ಗೆ ಶಾಲು ಹೊದಿಸಿ ಸನ್ಮಾನಿಸಿದರು, ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಪ್ರತಿಷ್ಠಿತ ‘ಏಕಲವ್ಯ’ ಪ್ರಶಸ್ತಿ ಪುರಸ್ಕೃತ H.S.ಸಾಕ್ಷಾತ್ ಪ್ರಸ್ತುತ ಕರ್ನಾಟಕ ರಾಜ್ಯದ ನೆಟ್‍ಬಾಲ್ ತಂಡದ ನಾಯಕರಾಗಿದ್ದಾರೆ. ಸಾಕ್ಷಾತ್ ರವರು 5 ಬಾರಿ ಹ್ಯಾಂಡ್‍ಬಾಲ್ ಹಾಗೂ 3 ಬಾರಿ ನೆಟ್‍ಬಾಲ್ ನ್ಯಾಷನಲ್ಸ್‌ನಲ್ಲಿ ಭಾಗವಹಿಸಿದ್ದಾರೆ. ಮುಂಬರುವ ಏಷಿಯನ್ ನೆಟ್‍ಬಾಲ್ ಚಾಂಪಿಯನ್ ಶಿಪ್‍ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸಾಕ್ಷತ್‌ರವರರಿಗೆ ಏಕಲವ್ಯ ಕಂಚಿನ ಪ್ರತಿಮೆ ಹಾಗೂ ಎರಡು ಲಕ್ಷ ರೂಪಾಯಿ ನಗದನ್ನೊಳಗೊಂಡ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಸಾಕ್ಷಾತ್ ಅವರ ತಂದೆ ಶಂಕರ್.ಹೆಚ್.ಟಿ ಅವರು ಚಾಲಕರಾಗಿದ್ದು, ಕೆಎಸ್ಸಾರ್ಟಿಸಿ ಚಿಕ್ಕಮಗಳೂರು ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕ್ಷಾತ್ ಅವರ ಈ ಸಾಧನೆಗೆ ತಾಯಿ ಸೀಮಾ ಡಿ.ಬಿ. ಕೂಡಾ ಸ್ಫೂರ್ತಿ. ಇವರ ಸಮ್ಮುಖದಲ್ಲೇ ಇಂದು ಕೆಎಸ್ಸಾರ್ಟಿಸಿ ಎಂಡಿ ಅನ್ಬುಕುಮಾರ್ ಅವರು ನಿಗಮದ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿ & ಜಾಗೃತ ವಿಭಾಗದ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ, ಕಾರ್ಮಿಕ ಕಲ್ಯಾಣಾಧಿಕಾರಿ, ಘಟಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.