ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ KSRTC ಇದೀಗ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಅವಲಂಬಿತರಿಗೆ ಮೊದಲ ಬಾರಿಗೆ ರೂ.10 ಲಕ್ಷ ಅಪಘಾತ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.
ಸಾರಿಗೆ ಸಚಿವರಾದ.ರಾಮಲಿಂಗ ರೆಡ್ಡಿ ಹಾಗೂ ಕೆಎಸ್ಸಾರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ (ವಾಸು) ಅವರು, ನಿಗಮದ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಮೃತರ ಅವಲಂಬಿತರಿಗೆ ರೂ 10 ಲಕ್ಷ ಅಪಘಾತ ಪರಿಹಾರದ ಚೆಕ್ ವಿತರಿಸಿದರು.
ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿನ ಅಪಘಾತದಲ್ಲಿ ಮೃತಪಟ್ಟಲ್ಲಿ ಪ್ರಯಾಣಿಕರ ಅವಲಂಬಿತರಿಗೆ ಈ ಹಿಂದೆ ರೂ. 3 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಅವಲಂಭಿತರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ 01.01.2024ರಿಂದ ಜಾರಿಗೆ ಬರುವಂತೆ ಈ ಪರಿಹಾರ ಮೊತ್ತವನ್ನು ರೂ. 10 ಲಕ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಈ ತೀರ್ಮಾನದಂತೆ, 04.02.2024ರಂದು ಹಾಸನ ವಿಭಾಗದ,ಚನ್ನರಾಯಪಟ್ಟಣ ಘಟಕದ ವಾಹನ ಬೆಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವಾಗ ಸಕಲೇಶಪುರದ ಸಮೀಪ ಬಾಗೆ ಎಂಬಲ್ಲಿ ಅಪಘಾತಕ್ಕೆ ಒಳಗಾಗಿ ಮೃತಪಟ್ಟ ಪ್ರಯಾಣಿಕ ಜಿ.ಎನ್ ಅಮೃತ್ (34) ತಂದೆ ಜಿ.ಡಿ ನಾಗರಾಜು ಅವರಿಗೆ ಇಂದು 10 ಲಕ್ಷ ರೂ.ಗಳ ಅಪಘಾತ ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ಅಪಘಾತಗಳು ಆಕಸ್ಮಿಕವೇ ಆದರೂ ಅದರಿಂದಾಗುವ ಪ್ರಾಣ ಹಾನಿ ಮತ್ತು ಕುಟುಂಬಕ್ಕೆ ಉಂಟಾಗುವ ನಷ್ಟವನ್ನು ಭರಿಸಲು ಅಸಾಧ್ಯ. ಆದರೂ ನಿಗಮವು ಪ್ರಯಾಣಿಕರೆಡೆಗಿನ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಿರುವುದಾಗಿ ಹಾಗೂ ಇತ್ತೀಚೆಗಷ್ಟೇ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾತ್ರಿ ಪಾಳಿಯ ಬಸ್ಸುಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರಿಗೆ ಫ್ಲಾಸ್ಕ್ (ಕಾಪಿ/ಟೀ/ಬಿಸಿನೀರು ಕುಡಿಯಲು ಅನುವಾಗುವಂತೆ) ನೀಡಲಾಗಿದೆ ಎಂದು ತಿಳಿಸಿರು.
KSRTC ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಅಪಘಾತಗಳನ್ನು ತಡೆಗಟ್ಟಲು ಸಂಸ್ಥೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.
KSRTC ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿಗಮ ನಿರ್ದೇಶಕರಾದ (ಸಿಬ್ಬಂದಿ ಮತ್ತು ಜಾಗೃತಿ),ಡಾ. ನಂದಿನಿ ದೇವಿ. ಕೆ, ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.