ಬೆಂಗಳೂರು: ಕರುನಾಡಿನ ಹೆಮ್ಮೆಯ ರಥ ಕೆಎಸ್ಸಾರ್ಟಿಸಿ ಸಂಸ್ಥೆ ಮತ್ತೊಂದು ಪ್ರಶಸ್ತಿಗೆ ಪಾತ್ರವಾಗಿದೆ. ಪ್ರತಿಷ್ಠಿತ ‘ಸಿಮ್ಯಾಕ್ ಉತ್ತಮ ಉಪಕ್ರಮ’ ಪುರಸ್ಕಾರವನ್ನು ಪಡೆಯುವ ಮೂಲಕ ಮತ್ತೊಮ್ಮೆ ಗಮನಸೆಳೆದಿದೆ.
ಕರ್ನಾಟಕ ಸರ್ಕಾರಿ ಸ್ವಾಮ್ಯದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜನಸಾಮನ್ಯರ ಅನುಕೂಲಕ್ಕೆ ತಕ್ಕಂತೆ, ಆಯ್ಕೆಗೆ ತಕ್ಕಂತೆ ಬಸ್ ಸೇವೆ ಒದಗಿಸುವ ಮೂಲಕ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯುತ್ತಮ ಸೇವೆಯ ಸಾರಿಗೆ ನಿಗಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಕಾರಣಕ್ಕಾಗಿ KSRTC ನಿಗಮಕ್ಜೆ ರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಈ ಸಾಧನೆಯ ಕಿರೀಟಗಳಿಗೆ ಮತ್ತೊಂದು ಪುರಸ್ಕಾರದ ಗರಿ ಸಿಕ್ಕಿದೆ. ಇದೀಗ, ಕೆಎಸ್ಸಾರ್ಟಿಸಿ’ಗೆ ಸಿಮ್ಯಾಕ್ ಉತ್ತಮ ಉಪಕ್ರಮ ಪ್ರಶಸ್ತಿ ಮತ್ತು 50,000 ರೂ ನಗದು ಪುರಸ್ಕಾರ ಸಿಕ್ಕಿದೆ.
KSRTCಯ ‘ಸಾರಿಗೆ ಸುರಕ್ಷಾ” ಉಪಕ್ರಮಕ್ಕೆ ಕರ್ನಾಟಕ ಸರ್ಕಾರದ ಪೌರಡಾಳಿತ ಇಲಾಖೆ ಹಾಗೂ ಸಿಮ್ಯಾಕ್ ಸಹಯೋಗದೊಂದಿಗೆ ನೀಡುವ ಉತ್ತಮ ಉಪಕ್ರಮ ಪ್ರಶಸ್ತಿ ಇದಾಗಿದೆ. KSRTC ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿ ಸಮೂಹವು ಇಂದು ಪೌರಾಡಳಿತ, ಸಣ್ಣ ಹಾಗೂ ಸಾರ್ವಜನಿಕ ವಲಯ ಕೈಗಾರಿಕಾ ಸಚಿವ ಎನ್.ನಾಗರಾಜು (ಎಂ.ಟಿ.ಬಿ) ಅವರಿಂದ ಸ್ವೀಕರಿಸಿದ ಸನ್ನಿವೇಶ ಗಮನಸೆಳೆಯಿತು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ , ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ ಅಜಯ್ ನಾಗಭೂಷಣ್ ಸಹಿತ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.