ಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ಮುಂಚೂಣಿ ಸೇವೆಯ ಮೂಲಕ ಗಮನಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮಹಾರಾಷ್ಟ್ರ ಸರ್ಕಾರಕ್ಕೂ ಮಾದರಿಯಾದಂತಿದೆ. ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್ ನತೃತ್ವದ ನಿಯೋಗ ಬೆಂಗಳೂರಿನಲ್ಲಿರುವ KSRTC ಕೇಂದ್ರ ಕಚೇರಿ ಹಾಗೂ ಕಾರ್ಯಾಗಾರಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಬೆಳವಣಿಗೆ ಕುತೂಹಲದ ಕೇಂದ್ರಬಿಂದುವಾಯಿತು.
KSRTC ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ನಿಯೋಗ ಐರಾವತ ಕ್ಲಬ್ ಕಾಸ್, ಐರಾವತ ಕ್ಲಬ್ ಕಾಸ್ 2.0, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳನ್ನು ವೀಕ್ಷಿಸಿತು. ಘಟಕ ಹಾಗೂ ಕಾರ್ಯಾಗಾರ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರಾಂಡಿಗ್ ಹಾಗೂ ವಾಹನಗಳ ಪುನಶ್ಚೇತನ ಕಾರ್ಯ ಹಾಗೂ ಹಲವು ಉಪಕ್ರಮಗಳ ಕುರಿತು ಮಹಾರಾಷ್ಟ್ರದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.