ಬೆಂಗಳೂರು: ಸಾರಿಗೆ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ KSRTCಗೆ ಮತ್ತಷ್ಟು ಪ್ರಶಸ್ತಿಗಳು ಬಂದಿವೆ. ಇದೀಗ KSRTCಗೆ 2 Elets Mobility Excellence 2026 ರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ.
Innovation in Citizen Engagement and Inclusive Mobility ವರ್ಗದಲ್ಲಿ ನಿಗಮದ ಧ್ವನಿಸ್ಪಂದನ ಉಪಕ್ರಮಕ್ಕೆ ಮತ್ತು Outstanding Public Transport Digitisation Initiative ವರ್ಗದಲ್ಲಿ ಯುಪಿಐ ಸೌಲಭ್ಯದೊಂದಿಗೆ AWATAR 4.0 ಯೋಜನೆಗೆ Elets Mobility Excellence ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕೆಎಸ್ಆರ್ಟಿಸಿಯ ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಧ್ವನಿ ಸ್ಪಂದನ’ – ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್* ಎಂಬ ಯೋಜನೆಯನ್ನು GiZ ಜರ್ಮನಿ ಸಹಯೋಗದೊಂದಿಗೆ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ದೃಷ್ಟಿ ವಿಕಲ ಚೇತನ ಪ್ರಯಾಣಿಕರ ಪ್ರಯಾಣ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸಂಚಾರದ ಸ್ವಾತಂತ್ರ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿದೆ.
AWATAR – Anywhere Anytime Advance Reservation” KSRTCಯ ಪ್ರಮುಖ ಡಿಜಿಟಲ್ ಆಸನ ಕಾಯ್ದರಿಸುವಿಕೆ ವ್ಯವಸ್ಥೆಯಾಗಿದ್ದು, ಪ್ರಯಾಣಿಕರು ವೆಬ್ ಹಾಗೂ ಮೊಬೈಲ್ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಟಿಕೆಟ್ಗಳನ್ನು ಸುಲಭವಾಗಿ ಕಾಯ್ದಿರಿಸಲು ಅವಕಾಶ ನೀಡುತ್ತದೆ. ಈ ವ್ಯವಸ್ಥೆಯಲ್ಲಿ ನೈಜ-ಸಮಯ (real-time) ಆಸನ ಲಭ್ಯತೆ, ತಕ್ಷಣದ ದೃಢೀಕರಣ ಮತ್ತು ಸುಗಮ ಪ್ರಯಾಣ ಯೋಜನೆ ಸೌಲಭ್ಯಗಳು ಲಭ್ಯವಿದ್ದು, ಪ್ರಯಾಣಿಕರ ಅನುಭವವನ್ನು ಸುಧಾರಿಸುವುದರ ಜೊತೆಗೆ ನಿಗಮದ ಕಾರ್ಯನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸಿದೆ. ಇದಕ್ಕೆ ಜೊತೆಯಾಗಿ ಅಳವಡಿಸಿರುವ ಡೈನಾಮಿಕ್ ಯುಪಿಐ (Dynamic UPI) ಪಾವತಿ ವ್ಯವಸ್ಥೆ ವೇಗವಾದ, ಸುರಕ್ಷಿತ ಮತ್ತು ಸಂಪೂರ್ಣ ನಗದುರಹಿತ ವ್ಯವಹಾರಗಳನ್ನು ಸಾಧ್ಯವಾಗಿಸಿ ಪಾರದರ್ಶಕತೆ ಮತ್ತು ಲೆಕ್ಕಪತ್ರ ಸರಳೀಕರಣವನ್ನು ಉತ್ತೇಜಿಸಿದೆ.
Elets National Mobility ರವರು 17.03.2026 ರಂದು ಹೈದರಾಬಾದಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಸಾರಿಗೆ ಇಲಾಖೆ ಆಯುಕ್ತ ಕೆ. ಇಳಂಬರಿತಿ, ಎಲೆಟ್ಸ್ ಟೆಕ್ನೋಮೀಡಿಯಾ ಸಂಸ್ಥಾಪಕ ಡಾ. ರವಿ ಗುಪ್ತಾ ಪ್ರಶಸ್ತಿ ಪ್ರದಾನ ಮಾಡಿದರು. KSRTC ನಿರ್ದೇಶಕರು (ಸಿ ಮತ್ತು ಜಾ) ಗಾಯಿತ್ರಿ ಪ್ರಶಸ್ತಿ ಸ್ವೀಕರಿಸಿದರು.
























































