ಕೆಆರ್‌ಐಡಿಎಲ್ ಇದೀಗ ಹಳಿ ತಪ್ಪಿದಂತಿದೆ. ಕಾನೂನು ಬಾಹಿರವಾಗಿ ಗುತ್ತಿಗೆ ಪಡೆಯುತ್ತಿರುವ ಆರೋಪಕ್ಕೆ ಗುರಿಯಾಗಿರುವ ನಿಗಮಕ್ಕೆ ‘ನಮೋ ಸಮಾಜ್’ ಒಂದರ ಹಿಂದೊಂದರಂತೆ ಶಾಕ್ ಕೊಡುತ್ತಿದೆ..ಅದ್ಯಕ್ಷರ ವೇಗಕ್ಕೆ ಬ್ರೇಕ್ ಹಾಕಿದ ಪತ್ರಗಳು..
ಬೆಂಗಳೂರು: ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ಸಂಬಂಧ ರೂಪಿಸಲಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ಇದೀಗ ಹಳಿ ತಪ್ಪಿದೆ. ಕಾಮಗಾರಿಗಳನ್ನು ಯಾವುದೇ ಬಿಡ್ ಮಾಡಿದೆ ಲಾಭಿಯ ಮೂಲಕವೇ ಕಾನೂನು ಬಾಹಿರವಾಗಿ ಗುತ್ತಿಗೆ ಪಡೆಯುತ್ತಿರುವ ಈ ನಿಗಮಕ್ಕೆ ‘ನಮೋ ಸಮಾಜ್’ ಒಂದರ ಹಿಂದೊಂದರಂತೆ ಶಾಕ್ ಕೊಡುತ್ತಿದೆ. ಇದೀಗ ಕಾನೂನು ತಿದ್ದುಪಡಿ ಮಾಡಿ ಕೆಆರ್‌ಐಡಿಎಲ್ ನಿಯಮಕ್ಕೆ ಕಾಯಕಲ್ಪ ನೀಡಲು ರಾಜಕಾರಣಿಗಳು ಲಾಬಿ ನಡೆಸುತ್ತಿದ್ದು ಈ ವಿಚಾರದಲ್ಲೋ ಮೋದಿ ಬೆಂಬಲಿಗರ ಪಡೆ ‘ನಮೋ’ ಮುಖಂಡರು ಸಾಂವಿಧಾನಿಕ ಅಂಶಗಳನ್ನೇ ಮುಂದಿಟ್ಟು ಶಾಸಕರನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಏನಿದು ‘ನಮೋ” ಅಸ್ತ್ರ..
ಕಾನೂನು ಪಂಡಿತರು, ಆರೆಸ್ಸೆಸ್ ಚಿಂತಕರೇ ಬಹುಪಾಲು ಮಂದಿಯನ್ನೊಳಗೊಂಡಿರುವ ‘ನಮೋ ಸಮಾಜ್’ ಮೋದಿ ಸೂತ್ರವನ್ನೇ ಅನುಸರಿಸಿ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತಲೇ ಬಂದಿದೆ. ಇದೀಗ ಸುಮಾರು 30,000 ಕೋಟಿ ಹಗರಣಗಳನ್ನು ಬೇಧಿಸಿರುವ ‘ನಮೋ ಸಮಾಜ್’ನ ದಕ್ಷಿಣ ಭಾರತ ಪ್ರಮುಖ್ ಅನಿಲ್ ಕುಮಾರ್ ಜಿ.ಆರ್.ಅವರು ಕೆಆರ್‌ಐಡಿಎಲ್ ನಿಗಮದ ಅಕ್ರಮವನ್ನು ಹೈಕೋರ್ಟ್‌ವರೆಗೆ ಕೊಂಡೊಯ್ದಿದ್ದಾರೆ. ಪ್ರಾಕೃತಿಕ ವಿಕೋಪದಂತಹಾ ಅತೀ ತುರ್ತು ಸಂದರ್ಭದಲ್ಲಿನ ಬಳಕೆಯ ಆದ್ಯತೆಗಿರುವ ಕೆಟಿಪಿಪಿ ಅಧಿನಿಯಮ 4(ಜಿ) ವಿನಾಯಿತಿಯನ್ನು ಅಪಬಳಕೆ ಮಾಡಿದೆ.
ಜನಪ್ರತಿನಿಧಿಗಳ ಹಾಗೂ ಐಎಎಸ್ ಲಾಭಿ ಮೂಲಕ ಈ ಅಕ್ರಮ ನಡೆದಿದ್ದು, ಈ ಬಗ್ಗೆ ಅಧ್ಯಯನ ನಡೆಸಿದ ಆರೆಸ್ಸೆಸ್ ಪಂಡಿತರ ಮಾರ್ಗದರ್ಶನದಲ್ಲಿ ಅನಿಲ್ ಕುಮಾರ್ ಜಿ.ಆರ್ ಅವರು ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿ 4(ಜಿ)ಯಡಿ ಅನುದಾನ ನೀಡುವ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಮಗಾರಿಯ ಕೊರತೆ ಎದುರಿಸುತ್ತಿರುವ ಕೆಆರ್‌ಐಡಿಎಲ್ ಬಡವಾಗಿದೆ.
ಕಾನೂನು ತಿದ್ದುಪಡಿಗೆ ಕಸರತ್ತು?
ಈ 4(ಜಿ) ವಿನಾಯಿತಿಯ ಅಪಬಳಕೆಯ ವಿಚಾರ ಬಹಿರಂಗವಾಗಿ ಇದೀಗ ಆ ಪ್ರಕ್ರಿಯೆ ಸ್ತಬ್ಧಗೊಂಡಿದೆ. ಹಾಗಾಗಿ ಪರ್ಯಾಯ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿ ಎಂದು ಕೋರಿ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಅವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಇವರು ಸಿಎಂ ಪುತ್ರ ವಿಜಯೇಂದ್ರರ ಆಪ್ತರಾಗಿರುವುದರಿಂದ ಅವರ ಅನತಿಗೆ ಮಣಿದು ಐಎಎಸ್ ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.
4(ಜಿ) ಬದಲಿಗೆ ನಿಯಮಕ್ಕೆ ತಿದ್ದುಪಡಿ ತರಲು ಪ್ರಯತ್ನ ನಡೆದಿದ್ದು ಈ ಸಂಬಂಧ ವಿಧಾನಮಂಡಲದಲ್ಲಿ ಅನುಮೋದನೆ ಪಡೆಯಲು ಹರಸಾಹಸ ನಡೆದಿದೆ. ಆದರೆ ಇದರಲ್ಲಿ ಪರಿಪೂರ್ಣ ಯಶಸ್ಸು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಸಿಎಂ ಪುತ್ರನೇ ಇದರ ಸೂತ್ರದಾರರಾಗಿರುವುದರಿಂದ ತಾವೂ ಈ ಪ್ರಕ್ರಿಯೆಗೆ ಸಹಮತ ವ್ಯಕ್ತಪಡಿಸುತ್ತಿರುವುದಾಗಿ ಐಎಎಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಈ ನಡುವೆ, 4(ಜಿ)ಗೆ ತಡೆಯಾಜ್ಞೆ ತಂದಿರುವ ‘ನಮೋ ಸಮಾಜ್’ ಮುಖಂಡ ಅನಿಲ್ ಕುಮಾರ್ ಜಿ.ಆರ್. ಅವರು ತಮ್ಮ ಹೋರಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದ್ದಾರೆ. ನಿಯಮ ತಿದ್ದುಪಡಿ ಪ್ರಕ್ರಿಯೆಯ ಸುಳಿವು ಇರುವ ಹಿನ್ನೆಲೆಯಲ್ಲಿ ಅವರು ರಾಜ್ಯ ಎಲ್ಲಾ ಶಾಸಕರು, ಸಚಿವರಿಗೆ ಕೋರ್ಟ್ ಆದೇಶದ ಪ್ರತಿಗಳೊಂದಿಗೆ ಪತ್ರ ಬರೆದು ಮುಂದಾಗಬಹುದಾದ ಕಾನೂನು ತೊಡಕುಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಈ ಪತ್ರ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು ಕೆಆರ್‌ಐಡಿಎಲ್ ಕಸರತ್ತು ಎಷ್ಟು ಫಲಪ್ರದವಾಗುತ್ತದೆ ಎಂಬುದೇ ಮುಂದಿರುವ ಕುತೂಹಲ.