ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕೆನರಾ ಬ್ಯಾಂಕ್ ರವರ ಸಹಯೋಗದೊಂದಿಗೆ ನೌಕರರಿಗೆ ಪ್ರೀಮಿಯಂ ರಹಿತ ರೂ.1.00 ಕೋಟಿಗಳ ಅಪಘಾತ ವಿಮಾ ಯೋಜನೆ ಜಾರಿಗೊಂಡಿದೆ.
ಡಿಸೇಂಬರ್ 3ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಸಚಿವರ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮತ್ತು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿಜಯಕುಮಾರ್ ಅವರು ಒಡಂಬಡಿಕೆ ವಿನಿಮಯ ಮಾಡಿಕೊಳ್ಳಲಾಯಿತು.
ಒಡಂಬಡಿಕೆಯಲ್ಲಿ ನಿಗಮದ ನೌಕರರ ವೇತನ ಖಾತೆಗಳನ್ನು ಕೆನರಾ ಬ್ಯಾಂಕಿನ ‘ಪೇ-ರೋಲ್ ಪ್ಯಾಕೇಜ್ ಸ್ಕೀಮ್’ ಅಡಿಯಲ್ಲಿ ತೆರೆದು ವಿಮಾ ಸೌಲಭ್ಯವನ್ನು ಎಲ್ಲಾ ನೌಕರರು ಶುಲ್ಕ ರಹಿತವಾಗಿ ಪಡೆಯಬಹುದಾಗಿದೆ.
ನಿಗಮದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತದಿಂದಾಗಿ ಆಗುತ್ತಿರುವ ಸಾವು-ನೋವುಗಳ ಪ್ರಮಾಣವನ್ನು ಗಮನಿಸಿ ಸಚಿವ ರಾಮಲಿಂಗ ರೆಡ್ಡಿಯವರು ಈ ಮಹತ್ವದ ವಿಮಾ ಯೋಜನೆ ಬಗ್ಗೆ ಚಿಂತನೆ ನಡೆಸಿದ್ದರು. ಸಾರಿಗೆ ನಿಗಮವು ನೌಕರರ ವೈಯಕ್ತಿಕ ಮತ್ತು ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ನೌಕರರು ನಿಧನರಾದಲ್ಲಿ 1.00ಕೋಟಿ ರೂ ಅಪಘಾತ ವಿಮೆಯ ಪರಿಹಾರ ಮೊತ್ತವನ್ನು ಹಾಗೂ ಡೆಬೀಟ್ ಕಾರ್ಡ ಹೊಂದಿದಲ್ಲಿ 6.00 ಲಕ್ಷ ದಿಂದ 14.00 ಲಕ್ಷ ರೂ ಹಾಗೂ ಪ್ರೀಮಿಯಂ ರಹಿತ 1.00ಲಕ್ಷ ದಿಂದ 6.00 ಲಕ್ಷ ರೂ ವರೆಗೆ ಉಚಿತ ‘Term Insurance’ ಪಾಲಿಸಿಯನ್ನು ನಾಮನಿರ್ದೇಶಿತರಿಗೆ ವಿತರಿಸಲಾಗುವುದುವೆಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಅಪಘಾತದಿಂದಾಗಿ ಅಂಗ ನ್ಯೂನ್ಯತೆ ಉಂಟಾದಲ್ಲಿ ಗಣನೀಯ ಮೊತ್ತದಷ್ಟು ಪರಿಹಾರ ಮೊತ್ತವನ್ನು ನೌಕರರಿಗೆ ದೊರಕಿಸಿಕೊಡುವ ಯೋಜನೆಯನ್ನು ರೂಪಿಸಿರುವುದಕ್ಕೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಕ.ಕ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ, ವಿತವ್ಯಯ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ, ನೌಕರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿರುತ್ತದೆ. ನಿಗಮದಲ್ಲಿ ಈಗಾಗಲೇ ಎಸ್.ಬಿ.ಐ ಬ್ಯಾಂಕಿನಲ್ಲಿ, ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಅಪಘಾತ ವಿಮೆಗೆ ಒಳಪಟ್ಟಿರುತ್ತಾರೆ.
ಸದರಿ ಬ್ಯಾಂಕುಗಳನ್ನು ಹೊರತುಪಡಿಸಿ ಕೆನರಾ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ಸುಮಾರು 3000 ನೌಕರರಿಗೂ ಕೂಡ ಅಪಘಾತ ವಿಮೆಯ ಸೌಲಭ್ಯವನ್ನು ವಿಸ್ತರಿಸುವುದು ಅವಶ್ಯಕತೆ ಇರುವುದನ್ನು ಮನಗಂಡು ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗಮದ ನೌಕರರಿಗೆ ಅಪಘಾತ ವಿಮೆ ಸೌಲಭ್ಯವನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು. ಅಪಘಾತ ಹೊರತುಪಡಿಸಿ, ಇತರೇ ನೈರ್ಸಗಿಕ ಸಾವುಗಳಿಗೆ ಕೆನರಾ ಬ್ಯಾಂಕಿನವರು ಪ್ರೀಮಿಯಂ ರಹಿತ ರೂ.6.00 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ನೀಡುತ್ತಾರೆ ಅಲ್ಲದೆ ನೌಕರರ ಮಕ್ಕಳ ವಿಧ್ಯಾಬ್ಯಾಸ, ಗೃಹ ಸಾಲ ಹಾಗೂ ವೈಯಕ್ತಿಕ ಮತ್ತು ವಾಹನ ಸಾಲಗಳಲ್ಲಿ ವಿಶೇಷ ಬಡ್ಡಿ ದರವನ್ನು ನೀಡುತ್ತಾರೆಂದು ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿವರಿಸಿದ್ದಾರೆ.