ಗದಗ: ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಗದಗದಲ್ಲಿ ಭಾನುವಾರ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಹೆಚ್.ಕೆ.ಪಾಟೀಲ್ ಸಹಿತ ಅನೇಕ ನಾಯಕರು, ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಹಕಾರಿ ಭೀಷ್ಮ ಎಂದೇ ಜನಜನಿತರಾಗಿರುವ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಗದಗ್ ಕೋ-ಆಪರೇಟಿವ್ ಕಾಟನ್ ಸೇಲ್ಸ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಮ್ಮ ಆದರ್ಶ ನಾಯಕರಾಗಿದ್ದ ಕೆ.ಹೆಚ್.ಪಾಟೀಲ್ ಅವರನ್ನು ಸ್ಮರಿಸಿದ ಡಿ.ಕೆ.ಶಿವಕುಮಾರ್, ಸಹಕಾರ ರಂಗದ ಭೀಷ್ಮ ಕೆ.ಹೆಚ್.ಪಾಟೀಲ್ ಅವರ ಜನಪರ ಕಾಳಜಿಯ ನಿದರ್ಶನಗಳು ನಮ್ಮ ಮುಂದಿವೆ. ಅವರು ಚುನಾವಣೆಯಲ್ಲಿ ಸೋತಾಗ ಕುಗ್ಗದೆ, ಅಧಿಕಾರ ಸಿಕ್ಕಾಗ ಹಿಗ್ಗದೆ ದಕ್ಷತೆಯಿಂದ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ದೃಢ ನಿರ್ಧಾರಗಳನ್ನು ಕೈಗೊಂಡು, ಸಹಕಾರಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದರು.
ಕೆ.ಹೆಚ್.ಪಾಟೀಲರು ಸಾಮಾನ್ಯರ ಮಧ್ಯೆ ಇದ್ದು ರಾಜಕಾರಣ ಮಾಡಿ ಜನಸಾಮಾನ್ಯರಿಗಾಗಿ ಹಗಲಿರುಳು ಶ್ರಮಿಸಿದ ದಿಟ್ಟ ನಾಯಕ. ಅವರ ಚಿಂತನೆಗಳು ನಮಗೆಲ್ಲಾ ಆದರ್ಶಪ್ರಾಯ ಎಂದ ಡಿಕೆಶಿ, ಕೆ.ಹೆಚ್ ಪಾಟೀಲರ ಜತೆ ನಾಲ್ಕೈದು ವರ್ಷ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ನಾನು ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು, ಅಂದು ಕೆ.ಹೆಚ್ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ 1985ರಲ್ಲಿ ನನಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿ ದೇವೇಗೌಡರ ವಿರುದ್ಧ ಸ್ಪರ್ಧಿಸುವಂತೆ ಹೇಳಿದರು. ಅಲ್ಲಿಂದ ಇಲ್ಲಿಯವರೆಗೂ ಸತತವಾಗಿ 9 ಬಾರಿ ಬಿ ಫಾರಂ ತೆಗೆದುಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ” ಎಂದು ಡಿಕೆಶಿ ನೆನಪಿಸಿಕೊಂಡರು.
“ಕೆ.ಹೆಚ್ ಪಾಟೀಲ್ ಅವರು ಸೋಲು, ಗೆಲುವು, ಯಶಸ್ಸು ಎಲ್ಲವನ್ನು ಕಂಡಿರುವ ಮಾನವತಾವಾದಿ. ಅವರ ಜೊತೆ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಮಣ್ಣಿಲ್ಲದೆ ಮಡಿಕೆ ಇಲ್ಲ, ಹಿರಿಯರ ಬಿಟ್ಟು ದೇವರಿಲ್ಲ. ತಂದೆ ತಾಯಿಗಳೇ ನಮ್ಮ ದೇವರು. ಅವರನ್ನು ಸ್ಮರಿಸುತ್ತಾ ಅವರು ತೋರಿದ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ಸಹಕಾರ ಕ್ಷೇತ್ರದಲ್ಲಿ ಕೆ.ಹೆಚ್ ಪಾಟೀಲ್ ಅವರು ಅನೇಕ ಸಂಸ್ಥೆಗಳನ್ನು ಕಟ್ಟಿದ್ದಾರೆ” ಎಂದರು.