ಬೆಂಗಳೂರು: ಪ್ರಜಾಸತ್ತೆಯ ಮಹಾಹಬ್ಬದಲ್ಲಿ ಎಲ್ಲರೂ ಭಾಗಿಯಾಗಿ ಬಲಿಷ್ಟ ಭಾರತ ಕಟ್ಟೋಣ, ಸೌಹಾರ್ದಯುತ ಕರ್ನಾಟಕ ಕಟ್ಟೋಣ ಎಂದು ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಂಚಮಸಾಲಿ ಸಮುದಾಯದವರಿಗೆ ಕರೆ ನೀಡಿದ್ದಾರೆ.
ಕೆಲ ಸಮಯದ ಹಿಂದೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಸುದೀರ್ಘ ಸತ್ಯಾಗ್ರಹ ನಡೆಸಿರುವ ಬಸವಜಯ ಮೃತ್ಯುಂಜಯ ಶ್ರೀಗಳು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದರು. ಮೀಸಲಾತಿ ಜಾರಿಯಾಗದಿದ್ದರೆ ಮತದಾನ ಬಹಿಷ್ಕರಿಸುವ ಅಥವಾ ಬ್ಯಾಲೆಟ್ ಪೇಪರ್‌ನಲ್ಲಿ ಉತ್ತರ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಮೀಸಲಾತಿ ಹೋರಾಟದಲ್ಲಿ ದಿಗ್ವಿಜಯ ಸಾಧಿಸಿರುವ ಶ್ರೀಗಳು ಇದೀಗ ಪಂಚಮಸಾಲಿ ಲಿಂಗಾಯತ ಸಮುದಾಯದ ಎಲ್ಲರೂ ಮತದಾನದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದ್ದಾರೆ.
ನಮ್ಮ ಸಮಾಜದವರು ಬಹಳಷ್ಟು ಮಂದಿ ರೈತಾಪಿ ಸಂಸ್ಕೃತಿಯನ್ನೇ ಅನುಸರಿಸುತ್ತಿರುವುದರಿಂದ ಹೆಚ್ಚಿನವರು ಮತ ಚಲಾಯಿಸಲ್ಲ ಎಂಬ ಭಾವನೆ ಇದೆ. ಹಾಗಾಗಿ ಎಲ್ಲರೂ ಮತಹಬ್ಬದಲ್ಲಿ ಭಾಗಿಯಾಗಿ ಶೇಕಡಾ ನೂರಷ್ಟು ಮತ ಚಲಾವಣೆಯಾಗಬೇಕು. ಬೆಳಿಗ್ಗೆ ಎದ್ದ ಕೂಡಲೇ ಲಿಂಗಪೂಜೆಗೆ ಗಮನ ನೀಡುವಷ್ಟೇ ಮಹತ್ವವನ್ನು ದೇಶದ ಪವಿತ್ರ ಹಬ್ಬಕ್ಕೂ ನೀಡಿ, ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಬೇಕು ಎಂದಿರುವ ಶ್ರೀಗಳು, ಇತರ ಸಮುದಾಯದವರು ಶೇಕಡಾ ನೂರರಷ್ಟು ಮತ ಚಲಾಯಿಸುವ ರೀತಿಯಲ್ಲೇ ನಮ್ಮ ಸಮುದಾಯದವರೂ ಮತಚಲಾಯಿಸಬೇಕು ಎಂದು ಸಲಹೆ ಮಾಡಿದ್ದಾರೆ.
https://twitter.com/unsocial2023/status/1655947919445590017?t=ZVLcAI68iP31zOP1OzOhQA&s=19
‘ನಿಮಗೆ ಯೋಗ್ಯರಾದವರಿಗೆ, ನಿಮ್ಮ ಹಿತವನ್ನು ಕಾಪಾಡುವವರಿಗೆ ಮತವನ್ನು ಚಾಲಾಯಿಸಿ, ಬಲಿಷ್ಟ ಭಾರತವನ್ನು, ಸೌಹಾರ್ದಯುತ ಕರ್ನಾಟಕವನ್ನು ಕಟ್ಟುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ’ ಎಂದವರು ಕರೆ ನೀಡಿದ್ದಾರೆ.