(ದೆಹಲಿ ಪ್ರತಿನಿಧಿ ವಿಶೇಷ ವರದಿ)
ದೆಹಲಿ: ರಾಜ್ಯ ರಾಜಕಾರಣ ಮತ್ತೊಂದು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಆಗಾಗ್ಗೆ ಪ್ರತಿಧ್ವನಿಸುತ್ತಿರುವಾಗಲೇ ಇದೀಗ ನೂತನ ಸಿಎಂ ಸ್ಥಾನಕ್ಕೂ ಅಚ್ಚರಿಯ ಹೆಸರು ಅಂತಿಮಗೊಂಡಿದೆ.
ಈ ಕುರಿತು ಬಿಜೆಪಿಯ ರಾಷ್ಟ್ರೀಯ ನಾಯಕರು ಸುಳಿವು ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ನೀಡಿದ್ದ ಹೇಳಿಕೆಯನ್ನಾಧರಿಸಿ ಸಿಎಂ ಯಡಿಯೂರಪ್ಪ ಕೂಡಾ ತಮ್ಮದೇ ದಾಟಿಯಲ್ಲಿ ನಿನ್ನೆ ಹೇಳಿಕೆ ನೀಡಿದ್ದರು. ಇನ್ನುಳಿದ ಎರಡು ವರ್ಷ ಕಾಲ ತಾನೇ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಕೆಲಸ ಮಾಡುವುದಾಗಿ ಬಿಎಸ್‌ವೈ ಹೇಳಿದ್ದರು. ಅದರ ಮರುದಿನವೇ ಸಿಎಂ ಬದಲಾವಣೆ ಬಗ್ಗೆ ವರಿಷ್ಠರು ಚಿಂತನೆ ನಡೆಸಿರುವ ಸಂಗತಿ ಬಯಲಾಗಿದೆ.
ವಯಸ್ಸಿನ ಮಾನದಂಡವನ್ನಾಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೇರೆ ಉನ್ನತ ಹುದ್ದೆಯನ್ನು ನೀಡುವ ಬಗ್ಗೆ ಬಿಜೆಪಿ ಹಾಗೂ ಆರೆಸ್ಸೆಸ್ ಪ್ರಮುಖರು ಚಿಂತನೆ ನಡೆಸಿದ್ದಾರೆ. ಬಿಎಸ್‌ವೈ ಉತ್ತರಾಧಿಕಾರಿ ಸ್ಥಾನಕ್ಕೆ ಡಿಸಿಎಂ ಅಶ್ವತ್ಥನಾರಾಯಣ್ ಅವರನ್ನು ಆಯ್ಕೆ ಮಾಡುವ ಬಗ್ಗೆಯೂ ಸಂಘದ ಹಿರಿಯರು ಒಲವು ತೋರಿದ್ದಾರೆ. ಬಿಜೆಪಿ ಧುರೀಣರ ಒಂದು ಬಣ ಕೂಡಾ ಅಶ್ವತ್ಥನಾರಾಯಣ್ ಅವರನ್ನು ಸಿಎಂ ಮಾಡಬೇಕೆಂದು ಭಾರೀ ಲಾಭಿ ನಡೆಸುತ್ತಿದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಡಾ ಒಲವು ತೋರಿದೆ ಎನ್ನಲಾಗುತ್ತಿದೆ.
ಜೂ.16ರಂದು ರಾಜ್ಯಕ್ಕೆ ಹೈಕಮಾಂಡ್ ದೌಡು..?
ಸದ್ಯವೇ ಕೇಂದ್ರ ಸಂಪುಟ ಸರ್ಜರಿ ನಡೆಯಲಿದ್ದು ಆ ಸಂದರ್ಭದಲ್ಲೇ ರಾಜ್ಯ ನಾಯಕತ್ವ ಬದಲಾವಣೆಯ ಪ್ರಕ್ರಿಯೆಯೂ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಪಕ್ಷದ ದೆಹಲಿ ಮೂಲಗಳು ತಿಳಿಸಿವೆ.ಈ ಸಂಬಂಧ ರಾಜ್ಯ ನಾಯಕರ ಅಭಿಪ್ರಾಯ ಆಲಿಸಲು ಈ ತಿಂಗಳ 16ರಂದು ಅರುಣ್ ಸಿಂಗ್ ಅವರು ರಾಜ್ಯಕ್ಕೆ ಭೆಟಿ ನೀಡುವ ಸಾಧ್ಯತೆಗಳಿವೆ ಎಂದು ದೆಹಲಿ ಬಿಜೆಪಿ ಕಚೇರಿ ಮೂಲಗಳು ತಿಳಿಸಿವೆ.
ಬಿಎಸ್‌ವೈಗೆ ಕುಟುಂಬಕ್ಕೆ ಬಂಪರ್..?
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದರೆ ಅವರಿಗೆ ಪರ್ಯಾಯ ಸಾಂವಿಧಾನಿಕ ಮಹತ್ವದ ಹುದ್ದೆಯನ್ನೇ ನೀಡುವುದು ಗೌರವದ ನಡೆ. ಹಾಗಾಗಿ ಅವರಿಗೆ ದಕ್ಷಿಣದ ರಾಜ್ಯಗಳ ಪೈಕಿ ಅವರ ಆಯ್ಕೆಗನುಗುಣವಾಗಿ ರಾಜ್ಯಪಾಲರ ಹುದ್ದೆ ನೀಡುವ ಬಗ್ಗೆ ಪಕ್ಷದ ಉನ್ನತ ನಾಯಕರು ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ, ಬಿಎಸ್‌ವೈ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲು ವರಿಷ್ಠರು ಒಲವು ತೋರಿದ್ದಾರೆನ್ನಲಾಗಿದೆ.