ಬೆಂಗಳೂರು: ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಇದು ಬಜೆಟ್ ಬಂಪರ್: ಈ ಬಗ್ಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ
ಸಹಕಾರ ಇಲಾಖೆಗೆ ಕೊಡುಗೆ ಈ ರೀತಿ ಇದೆ:
-
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಜೋಳ, ಹೆಸರುಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 6,650 ಕೋಟಿ ರೂ. ಒದಗಿಸಲಾಗಿದೆ.
-
ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು ರೂ.3.00ಲಕ್ಷಗಳಿಂದ 5.00ಲಕ್ಷಗಳಿಗೆ ಹೆಚ್ಚಿಸಲಾಗುವುದು. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ದೊರಕಿಸಿದಂತಾಗುತ್ತದೆ. ಈ ವರ್ಷ 30ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ರೂ.25,000.00ಕೋಟಿಗಳಷ್ಟು ಸಾಲ ವಿತರಿಸಲಾಗುವುದು.
-
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ‘ಭೂಸಿರಿ’ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂ.ಗಳ ಹೆಚ್ಚುವರಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2500 ರೂ. ಹಾಗೂ ನಬಾರ್ಡ್ ನ 7500 ರೂ. ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.
-
ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
-
ಆವರ್ತ ನಿಧಿಗೆ ಬಲ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಧಾನಗಳಿಗೆ, ರೈತರಿಗೆ ತ್ವರಿತವಾಗಿ ಹಣ ಪಾವಡಿ ಮಾಡಲು ಸ್ಥಾಪಿಸಿರುವ ಆವರ್ತ ನಿಧಿಯನ್ನು ನಮ್ಮ ಸರ್ಕಾರದ ಕಾಲಾವಧಿಯಲ್ಲಿ 2,000 ಕೋಟಿ ರೂ.ಗಳವರೆಗೆ ಹೆಚ್ಚಿಸಲಾಗುವುದೆಂದು 2020-21ನೇ ಸಾಲಿನಲ್ಲಿ ಘೋಷಿಸಲಾಗಿತ್ತು. ಪ್ರಸ್ತುತ ಆವರ್ತ ನಿಧಿ ಮತ್ತು ಕರ್ನಾಟಕ ಆಹಾರ ನಿಗಮಕ್ಕೆ ಧಾನ್ಯಗಳ ಖರೀದಿಗೆ ಬಿಡುಗಡೆ ಮಾಡಿರುವ ಅನುದಾನ ಸೇರಿ ಒಟ್ಟು 1,000 ಕೋಟಿ ರೂ.ಗಳಿದ್ದು, 2022-23ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 1,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರಸಕ್ತ ಆಯವ್ಯಯದಲ್ಲಿ 1,500 ಕೋಟಿ ರೂ.ಗಳನ್ನು ಒದಗಿಸಿ, 3,500 ಕೋಟಿ ರೂ. ಗಳಿಗೆ ಏರಿಸಲಾಗುವುದು. ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಗಾತ್ರದ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿ ಆಗಲಿದೆ.
-
ಕಳೆದ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, ಯಶಸ್ವಿನಿ ಯೋಜನೆಯನ್ನು ಮರುಜಾರಿಗೊಳಿಸಿ, ಪ್ರಸ್ತುತ 32 ಲಕ್ಷ ರೈತರನ್ನು ನೋಂದಾಯಿಸಲಾಗಿದೆ. ಈಗಾಗಲೇ ರೈತರು ಈ ಯೋಜನೆಯ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.
-
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸಲು ಸರ್ಕಾರ ಒತ್ತು ನೀಡಿದೆ. ಸ್ವಸಹಾಯ ಗುಂಪುಗಳಿಗೆ ಪ್ರಮಾಣಿತ ಉತ್ಪನ್ನಗಳನ್ನು ತಯಾರಿಸಲು ನೆರವಾಗುವ ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿರ ಸ್ವಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂ.ನಂತೆ ಒಟ್ಟು 500 ಕೋಟಿ ರೂ.ಗಳ ಸಮುದಾಯ ಬಂಡವಾಳ ನಿಧಿ ನೀಡಲು ಕ್ರಮ ವಹಿಸಲಾಗುತ್ತಿದೆ. ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿ 7,239 ಸ್ವಸಹಾಯ ಸಂಘಗಳಿಗೆ 108 ಕೋಟಿ ರೂ.. ಸಮುದಾಯ ಬಂಡವಾಳ ನಿಧಿ ಹಾಗೂ 5.68 ಲಕ್ಷ ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕದಡಿ 11,391 ಕೋಟಿ ರೂ. ಸಾಲವನ್ನು ಒದಗಿಸಲಾಗಿದೆ. ವೈಯಕ್ತಿಕ ಮತ್ತು ಗುಂಪುಗಳನ್ನೊಳಗೊಂಡ 9,688 ಫಲಾನುಭವಿಗಳಿಗೆ ಕಿರು ಉದ್ದಿಮೆ ಪ್ರಾರಂಭಿಸಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ.
-
ಇದಲ್ಲದೇ, ಸಹಕಾರ ವಲಯದಲ್ಲಿ ಕಳೆದ ವರ್ಷದಲ್ಲಿ 40,000 ಮಹಿಳಾ ಸ್ವಸಹಾಯ ಗುಂಪುಗಳಿಗೆ 1,600 ಕೋಟಿ ರೂ.ಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ 96 ಕೋಟಿ ರೂ. ಬಡ್ಡಿ ಸಹಾಯಧನ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ 1,800 ಕೋಟಿ ರೂ.ಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಗುರಿ ಹೊಂದಲಾಗಿದೆ.