ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತೆಯರು ಮತ್ತೆ ಹೋರಾಟದ ಅಖಾಡಕ್ಕೆ ಧುಮುಕಿದ್ದಾರೆ. ತಮ್ಮ ಹಕ್ಕೊತ್ತಾಯಗಳಿಗೆ ಸರ್ಕಾರ ಮಣಿಯದಿದ್ದರಿಂದ ಮತ್ತೆ ಪ್ರತಿಭಟನೆ ನಡರಸುವುದಾಗಿ ಘೋಷಿಸಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಸಂಘದ ರಾಜ್ಯ ಉಪಾಧ್ಯಕ್ಷರಾದ ರಮಾ ಟಿ.ಸಿ.,ಬೆಂಗಳೂರು ಜಿಲ್ಲಾ ಎಐಯುಟಿಯುಸಿ ಅಧ್ಯಕ್ಷ ಷಣ್ಮುಗಂ ಸಹಿತ ಸಂಘದ ಪ್ರಮುಖರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಭಟನೆ ಕುರಿತು ಮಾಹಿತಿ ನೀಡಿದರು.
ಕಳೆದ 15 ವರ್ಷಗಳಿಂದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಗಳೂ ಸೇರಿದಂತೆ, ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಆರೋಗ್ಯ ಚಟುವಟಿಕೆಗಳು ಮತ್ತು ಹಲವಾರು ಸಮೀಕ್ಷೆಗಳನ್ನು ನಿರಂತರವಾಗಿ ಮಾಡುತ್ತಿರುವರು. ರಾಜ್ಯದ ಬಡಜನರಿಗೆ ಆಶಾ ನೀಡುತ್ತಿರುವ ವಿವಿಧ ಆರೋಗ್ಯ ಸೇವೆಗಳನ್ನು ಶ್ಲಾಘಿಸದೇ ಇರುವವರೇ ಇಲ್ಲ. ಇದೀಗ ಅವರು ಆರೋಗ್ಯ ಇಲಾಖೆಯ ಖಾಯಂ ನೌಕರರೇ ಆಗಿ ಹೋಗಿದ್ದಾರೆ. ಇಲಾಖೆಯ ಎಲ್ಲಾ ಸಾರ್ವಜನಿಕ ಆರೋಗ್ಯ ಸೇವೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯನ್ನು ಪುನಶ್ಚೇತನಗೊಳಿಸಿದ್ದಾರೆ ಎಂದು ಇಲಾಖೆಯೇ ಅಂಗೀಕರಿಸಿರುವುದು ಇಲಾಖೆಯಲ್ಲಿ ಅವರ ಸೇವೆ, ಅವರ ಶ್ರಮ ಮತ್ತು ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ತಿಳಿಸಿದರು.
ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವಲ್ಲಿ, ಜನರಿಗೆ ಲಸಿಕೆ ಹಾಕಿಸುವಲ್ಲಿ ಇವರು ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರವಹಿಸಿರುವುದು. ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ತಡೆಗೆ ನಡೆಸಿದ ಹೋರಾಟ ನಿಜಕ್ಕೂ ಅದ್ಭುತ. ಕೇಂದ್ರ ಸರ್ಕಾರ ರಾಜ್ಯದ ಆಶಾ ಕಾರ್ಯಕರ್ತೆಯರ ಸೇವೆಗೆ ಮೆಚ್ಚಿ ದೇಶದಲ್ಲಿಯೇ ಅತ್ಯುತ್ತಮ ಸೇವೆ ಸಲ್ಲಿಸಿರುವರೆಂದು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದೆ.
ಇಲಾಖೆ ವಹಿಸಿದ ವಿವಿಧ ಕೆಲಸಗಳನ್ನು ಹಗಲಿರುಳು ಮಾಡಿದರೂ ದುಡಿದಷ್ಟು ಕೈಗೆ ತಲುಪದಿರುವುದು ಅತ್ಯಂತ ಖೇದದ ವಿಷಯವಾಗಿದೆ. ಖಅಊ ಪೋರ್ಟಲ್ ಮೂಲಕ ನೀಡುವ ಕೇಂದ್ರದ ಪ್ರೋತ್ಸಾಹಧನ ಹಲವಾರು ವರ್ಷಗಳಿಂದ ಸರಿಯಾಗಿ ಪಡೆಯಲು ಆಗದಿರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ. ಇಂದಿಗೂ ಸಮಸ್ಯೆ ಬಗೆಹರಿದಿರುವುದಿಲ್ಲ. ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹಧನ ನೀಡುವ ಪೋರ್ಟಲ್ ವೇತನ ಮಾದರಿಯಿಂದಾಗಿ ಕಾರ್ಯಕರ್ತೆಯರು ಹಲವಾರು ವರ್ಷದಿಂದ ಸಹಸ್ರಾರು ರೂಪಾಯಿಗಳಿಂದ ವಂಚಿತರಾಗಿದ್ದಾರೆ. ಇವರು ಸಲ್ಲಿಸಿದ ಸೇವೆಗಳಿಗೆ ಹಣ ಪಡೆಯಲು ಖಅಊ ಪೋರ್ಟಲ್‌ನಲ್ಲಿ ದಾಖಲಾಗಬೇಕು. ಈ ದಾಖಲು ಮಾಡಬೇಕಾದವರು ಮತ್ತೊಬ್ಬರು. ಅವರು ದಾಖಲು ಮಾಡಿಲ್ಲವೆಂದರೆ ತಿಂಗಳಿಡೀ ಇವರು ಮಾಡಿದ ಕೆಲಸಗಳಿಗೆ ಹಣ ಬರುವುದಿಲ್ಲ. ಎಷ್ಟೋ ಕಡೆ ಇಂಟರ್ನಟ್ ಸಿಗುವುದಿಲ್ಲ. ಆಗಲೂ ಇವರಿಗೆ ಹಣದಿಂದ ವಂಚನೆ! ಒಬ್ಬ ಕಾರ್ಯಕರ್ತೆ ಪ್ರತೀ ತಿಂಗಳು ರೂ.5-6 ಸಾವಿರ ರೂಪಾಯಿಗಳ ಬೆಲೆಯ ಚಟುವಟಿಕೆಗಳನ್ನು ಮಾಡಿ, ಪ್ರತಿಫಲವಾಗಿ ಕೇವಲ ರೂ.1000ದಿಂದ ರೂ.3000 ವರೆಗೆ ಮಾತ್ರ ಪ್ರೋತ್ಸಾಹಧನ ಪಡೆಯುವಂತಾಗಿದೆ. ಹಲವಾರು ಕಡೆಗಳಲ್ಲಿ ಕೆಲವೊಂದು ತಿಂಗಳು ಸಂಪೂರ್ಣ ಪ್ರೋತ್ಸಾಹಧನ ಬರದೇ ಇರುವ ಪ್ರಕರಣಗಳೂ ಇವೆ. ಇದಕ್ಕೆ ಸಂಬAಧಿಸಿದ ಜ್ವಲಂತ ಸಮಸ್ಯೆಗಳಿಗೆ ಕಳೆದ ಮೂರು ನಾಲ್ಕು ವರ್ಷಗಳಿಂದ ಪರಿಹಾರ ದೊರೆಯುತ್ತಿಲ್ಲ ಎಂದರು.
ರಾಜ್ಯದ 31 ಜಿಲ್ಲೆಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಈ ಸಮಸ್ಯೆಗಳಿದ್ದು, ಹಲವಾರು ವರ್ಷಗಳಿಂದ ಪರಿಹಾರ ಕಾಣದೇ ಉಳಿದಿದೆ. ಈ ಬಗ್ಗೆ ಆಯಾ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆಯಾ ಜಿಲ್ಲೆಗಳಿಂದ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆಗಳು ಹಲವಾರು ರೀತಿಯಲ್ಲಿವೆ. ಬಹುತೇಕ ಕಡೆಗಳಲ್ಲಿ ಬಾಕಿ ದಾಖಲು ಆಗಿರುವುದಿಲ್ಲ. ಕೆಲವೊಂದು ಬಾರಿ ತಾಂತ್ರಿಕ ಸಮಸ್ಯೆಗಳು. ಖಅಊ ಪೋರ್ಟಲ್ನಲ್ಲಿ ದಾಖಲಾಗಿದ್ದರೂ, ವೆರಿಫಿಕೇಶನ್ಗೆ ಬರುವುದಿಲ್ಲ. ಕೆಲ ಬಾರಿ ವೆರಿಫಿಕೇಶನ್‌ಗೆ ಬಂದಿರುವುದು, ವೆರಿಫಿಕೇಶನ್ ಮಾಡುವ ಮುಂಚೆಯೇ “ಪೋರ್ಟಲ್‌ನಿಂದಲೇ ದಾಖಲೆ ಮಾಯ!” ಆಗಿರುತ್ತದೆ. ಒಂದು ತಿಂಗಳಲ್ಲಿ ದಾಖಲು ಮಾಡಿದ ಕೇಸ್ಗಳು ಆ ತಿಂಗಳು ಬಾರದೆ ಮುಂದೆ 5-6 ತಿಂಗಳ ನಂತರ ಯಾವುದೋ ಒಂದು ಪ್ರಕರಣಕ್ಕೆ ಹಣ ಪಾವತಿಯಾಗುವುದು. ಕೆಲ ಪಿಎಚ್ಸಿಗಳಲ್ಲಿ ಹಲವಾರು ತಿಂಗಳುಗಳ ವರೆಗೆ ಅಲ್ಲಿ ಕೆಲಸ ಮಾಡಿದ ಎಲ್ಲಾ ಆಶಾಗಳ ಯಾವೊಂದು ಕೇಸ್ ಪೋರ್ಟಲ್‌ನಲ್ಲಿ ದಾಖಲಾಗದೆ ಇರುವುದು. ಸಮಸ್ಯೆಗಳು ಒಂದೇ ಎರಡೇ ಹತ್ತಾರು ಅಲ್ಲ ನೂರಾರು ಇವೆ. ಒಟ್ಟಾರೆ ಒಬ್ಬ ಕಾರ್ಯಕರ್ತೆಯು “ಒಂದು ತಿಂಗಳಲ್ಲಿ ಮಾಡಿದ ಒಟ್ಟು ಕೆಲಸಗಳಲ್ಲಿ ಕೆಲವು ಕೆಲಸಗಳಿಗೆ ಪ್ರೋತ್ಸಾಹಧನದ ಹಣ ಬಂದರೆ, ಇತರ ಕೆಲಸಗಳಿಗೆ ಹಣ ಬರುವುದೇ ಇಲ್ಲ”. ಇಲಾಖೆಯಲ್ಲಿ ವಿಚಾರಿಸಿದರೆ, ನೂರೆಂಟು ಕಾರಣಗಳು ನೀಡಲಾಗುತ್ತದೆ. ಈ ರೀತಿ ಪ್ರತಿ ತಿಂಗಳು ಮಾಡಿದ ಪ್ರೋತ್ಸಾಹಧನದ ಚಟುವಟಿಕೆಗಳಿಂದ ಹಣ ಬರದೇ ಇರುವ ಸಾವಿರಾರು ಆಶಾ ಕಾರ್ಯಕರ್ತೆಯರಿಗೆ ಇಲಾಖೆಯಿಂದ ಬರಬೇಕಾದ ಹಣ ಲಕ್ಷಾಂತರ ರೂಪಾಯಿ ಆಗುತ್ತದೆ. ಈ ಬಗ್ಗೆ 5 ವರ್ಷದಲ್ಲಿ ದಾಖಲೆ ಸಮೇತ ಇಲಾಖೆಗೆ ದೂರು ನೀಡಲಾಗಿದೆ. ಆದರೂ ಈ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದರು.
ಆಶಾ ಕಾರ್ಯಕರ್ತೆಯರು ಮಾಡಿದ ಎಲ್ಲಾ ಕೆಲಸಗಳನ್ನು ತಪ್ಪದೆ ದಾಖಲು ಮಾಡಿಸಿ, ಪ್ರತಿ ಕಾರ್ಯಕರ್ತೆಗೆ ಒಂದು ತಿಂಗಳು ಮಾಡಿರುವ ಒಟ್ಟು ಕೆಲಸಗಳಿಗೆ ಬರಬೇಕಾದ ಒಟ್ಟು ಹಣವನ್ನು ಆ ಕಾರ್ಯಕರ್ತೆಯ ಬ್ಯಾಂಕ್ ಖಾತೆಗೆ ಸಂದಾಯವಾಗುವAತೆ ವ್ಯವಸ್ಥೆ ಮಾಡಬೇಕು. ಅಥವಾ ಕೇಂದ್ರ ಸರ್ಕಾರ ಈ ಚಟುವಟಿಕೆಗಳಿಗೆ ನಿಗದಿಗೊಳಿಸಿದ ಅಷ್ಟೂ ಚಟುವಟಿಕೆಗಳ ಹಣವನ್ನು ರಾಜ್ಯ ಸರ್ಕಾರ ಈಗಾಗಲೇ ನೀಡುತ್ತಿರುವ ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವಧನಕ್ಕೆ ಸೇರಿಸಿ ಒಂದೇ ಮಾಸಿಕ ನಿಶ್ಚಿತ ಗೌರವಧನ ಮಾಡಬೇಕು. ಅದನ್ನು ಪ್ರತಿ ತಿಂಗಳು 10ನೇ ತಾರೀಖಿನ ಒಳಗಡೆ ಬ್ಯಾಂಕ್ ಖಾತೆಗೆ ಪಾವತಿಸಬೇಕು ಎಂದರು.
ಇತರ ಪ್ರಮುಖ ಸಮಸ್ಯೆಗಳೆಂದರೆ, ಆಶಾ ಕಾರ್ಯಕರ್ತೆಯರಿಗೆ ಇಲಾಖೆಯಿಂದ ಮೊಬೈಲ್/ಟ್ಯಾಬ್ ನೀಡಿಲ್ಲ. ಇಂಟರ್ನೆಟ್ ಡಾಟಾ ಒದಗಿಸಿಲ್ಲ. ಆದರೂ ಕೂಡಾ ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳ ಬಳಕೆಗಾಗಿ ವಿವಿಧ ರೀತಿಯ ಸಮೀಕ್ಷೆಗಳನ್ನು ಮೊಬೈಲ್ ಆ್ಯಪ್ ಮೂಲಕ ಮಾಡಬೇಕೆಂದು ಒತ್ತಾಯ ಪಡಿಸಲಾಗುತ್ತಿದೆ. ಉಚಿತವಾಗಿ ಹೇಳಿದ ಸರ್ವೇ ಮಾಡದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಹೆದರಿಸಿ, ಒತ್ತಾಯದಿಂದ ಸರ್ವೇಗಳನ್ನು ಮಾಡಿಸಲಾಗುತ್ತಿದೆ. ಆಶಾಗಳದ್ದಲ್ಲದ ಇತರ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಲಾಗುತ್ತದೆ. ಈ ಕೆಲಸಗಳನ್ನು ಆಶಾಗಳು ಮಾಡಬಾರದು ಎಂದು ಇಲಾಖೆ ಸುತ್ತೋಲೆಗಳನ್ನು ಹೊರಡಿಸಿತ್ತು. ಅಷ್ಟಿದ್ದರೂ ಸರ್ವೇ ಕೆಲಸ ಮಾಡಲೇಬೇಕು ಇಲ್ಲವೆಂದರೆ ಆಶಾ ವೇತನ ನೀಡುವುದಿಲ್ಲ ಕೆಲಸದಿಂದಲೇ ತೆಗೆದು ಹಾಕಲಾಗುವುದು ಇತ್ಯಾದಿ ಬೆದರಿಕೆಗಳನ್ನು ಹಾಕಿ ಇದೇ ಕೆಲಸವನ್ನು ಅವಲಂಬಿಸಿರುವ ಬಡ ಹೆಣ್ಣುಮಕ್ಕಳು, ಒಂಟಿ ಮಹಿಳೆಯರು, ವಿಧವೆಯರು, ವಿಚ್ಛೇದಿತರರಂತಹ ಅಸಹಾಯಕ ಮಹಿಳೆಯರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಇಲಾಖೆ ಬಲವಂತದಿAದ ಕೆಲಸ ಮಾಡಿಸಿಕೊಳ್ಳುತ್ತಿದೆ. ಆಶಾ ಕಾರ್ಯಕರ್ತೆ ದಿನಕ್ಕೆ ೨-೩ ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿ ಸೇವೆಗೆ ಸೇರಿಸಿಕೊಂಡು ಅತ್ಯಂತ ಕಡಿಮೆ ಹಣದಲ್ಲಿ ಇಂದು ದಿನವಿಡೀ ದುಡಿಸಿಕೊಳ್ಳುತ್ತಿರುವುದು ಅನ್ಯಾಯ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಗೆ ಟೀಮ್ ಬೇಸ್ಡ್ ಇನ್ಸೆಂಟಿವ್ ಮಾಸಿಕ ರೂ.೧೦೦೦ ಇರುತ್ತದೆ .ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಪ್ರೋತ್ಸಾಹಧನ ನೀಡಿಲ್ಲ. ಪ್ರತೀ ವರ್ಷ ನೀಡಬೇಕಾದ ಡೈರಿ, ಸಮವಸ್ತç ನೀಡುತ್ತಿಲ್ಲ.
ಆದ್ದರಿಂದ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಎಐಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮೇ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ “ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಪ್ರದರ್ಶನ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ.ನಾಗಲಕ್ಷ್ಮಿ ತಿಳಿಸಿದರು.