ಬೆಂಗಳೂರು: ಮುಂದಿನ ಮೂರು ದಶಕದಗೊಳಗೆ ಕಲಬುರಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸರ್ವಾಂಗೀಣ ಅಭಿವೃದ್ಧಿಪಡಿಸುವ ಸಂಬಂಧ ಜಾರಿಗೊಳಿಸಲು ಉದ್ದೇಶಿಸಿರುವ ” ಕಲಬುರಗಿ ವಿಷನ್ -2050″ ಅನುಷ್ಠಾನಕ್ಕಾಗಿ ಇದೇ 14ರಂದು ಪರಿಣಿತರ ಮಹತ್ವದ ಸಭೆಯನ್ನು ಕರೆಯಲಾಗಿದೆ ಎಂದು ಸಚಿವ ಮುರಗೇಶ್ ಆರ್.ನಿರಾಣಿ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಕಲಬುರಗಿ ಜಿಲ್ಲಾ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಜತೆ ಕೋವಿಡ್ , ಪ್ರವಾಹ, ಬಿತ್ತನೆ ಹಾಗೂ ಸ್ಥಿತಿಗತಿ ಕುರಿತಂತೆ ವೀಡಿಯೋ ಕಾನ್ಫರೆನ್ಸ್ ನಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದೇ 14ರಂದು ಕಲಬುರಗಿ ವಿಷನ್-2050 ಕುರಿತ ಮಹತ್ವದ ಸಭೆ ನಡೆಸಲಾಗುವುದು. ಜನಪ್ರತಿನಿಧಿಗಳು, ಅಧಿಕಾರಿಗಳು, ನಿವೃತ್ತ ಐಎಎಸ್, ಐಪಿಎಸ್, ಕೆಎಎಸ್, ಕೃಷಿ, ಕೈಗಾರಿಕೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಅನುಭವ ಪಡೆದಿರುವ ನಿವೃತ್ತ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕೆಂದು ಮನವಿ ಮಾಡಿದರು
ಮುಂದಿನ ಮೂರು ದಶಕದೊಳಗೆ ಜಿಲ್ಲೆಯನ್ನು ಬೇರೆ ಜಿಲ್ಲೆಗಳಿಗಿಂತಲೂ ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಅಂದು ಸಭೆಯಲ್ಲಿ ಯಾರು ಬೇಕಾದರೂ ಸಲಹೆ ನೀಡಬಹುದು. ಆ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು. ಆಸಕ್ತಿ ಇರುವವರು ಮುಕ್ತವಾಗಿ ಬರಬೇಕೆಂದು ಹೇಳಿದರು.
ಕಲಬುರಗಿ ಜಿಲ್ಲೆಯ ಶಹಬಾದ್ ನಲ್ಲಿ ಪುನರ್ ನವೀಕರಣಗೊಂಡಿರುವ ಇಎಸ್‍ಐ ಆಸ್ಪತ್ರೆ ಉದ್ಘಾಟಿಸಲಾಗುವುದು. ಇದರಿಂದ ಜಿಲ್ಲೆಯ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಸ್ರೇಲ್ ಮಾದರಿಯ ಕೃಷಿ
ಜಿಲ್ಲೆಯಲ್ಲಿರುವ ಸಂಪನ್ಮೂಲವನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರವನ್ನು ನಡೆಸಲು ಉದ್ದೇಶಿಸಲಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇಸ್ರೇಲ್ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನೂರು ಎಕರೆ ಜಮೀನಿನಲ್ಲಿ ಬೇರೆ ಬೇರೆ ಮಾದರಿಯ ಬೆಳೆಗಳನ್ನು ಬೆಳೆಯುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಈಗಾಗಲೇ ಇಸ್ರೇಲ್‍ನ ಕಾನ್ಸಲೇಟ್ ಅಧಿಕಾರಿಗಳನ್ನು ಆ.14ರಂದು ಕಲಬುರಗಿಗೆ ಆಹ್ವಾನಿಸಲಾಗಿದೆ. ಮೊದಲ ಹಂತದಲ್ಲಿ ನೂರು ಎಕರೆ ಜಮೀನಿನಲ್ಲಿ ಇಸ್ರೇಲ್ ಪದ್ಧತಿಯನ್ನು ಅಳವಡಿಸಲಾಗುವುದು. ವರ್ಷದಲ್ಲಿ ಒಂದೇ ಬೆಳೆ ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಢವಾಗುವುದಿಲ್ಲ. ಬೇರೆ ಬೇರೆ ಬೆಳೆ ಬೆಳೆಯುವುದರಿಂದ ಹೆಚ್ಚಿನ ಆದಾಯ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ
ಇದೇ ವೇಳೆ ಸಚಿವ ನಿರಾಣಿ ಅವರು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಸ್ಥಳಗಳಲ್ಲಿ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟರು. ವೀಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಜಿಲ್ಲೆಯ ಸಮಗ್ರ ಮಾಹಿತಿ ಪಡೆದ ಸಚಿವರು, ಕೋವಿಡ್ ನಿಯಂತ್ರಣ, ಪ್ರವಾಹ, ಬಿತ್ತನೆ ಬೀಜದ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳುವುದು ಹಾಗೂ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವುದು, ಗಡಿ ಭಾಗಗಳಲ್ಲಿ ಚೆಕ್ ಪೆÇೀಸ್ಟ್ ಬಿಗಿ ಮಾಡುವುದು, ಲಸಿಕೆ ಪ್ರಮಾಣ ಹೆಚ್ಚಿಸುವುದು ಸೇರಿದಂತೆ ಜಿಲ್ಲಾಡಳಿತ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಕಲಬುರಗಿ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆ ಹಾಕಿಸಿದ ಜಿಲ್ಲೆಯಾಗಬೇಕು. ಇದಕ್ಕೆ ಅಧಿಕಾರಿಗಳ ಪರಿಶ್ರಮ ಅತ್ಯಗತ್ಯ ಎಂದು ಹೇಳಿದರು
ಮುಂದಿನ ಎರಡು ವರ್ಷಗಳ ಕಾಲ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳು ಬೇರೆ ಸ್ಥಳಗಳಿಗೆ ವರ್ಗಾವಣೆಯಾಗಬೇಕಾದರೆ ಮುಂಚಿತವಾಗಿಯೇ ಹೇಳಬೇಕು. ನಾವು ಎಲ್ಲಿ ವರ್ಗಾವಣೆಯಾಗಿಬಿಡುತ್ತೇವೋ, ಬೇರೆಯವರು ಎಲ್ಲಿ ಬಂದು ಬಿಡುತ್ತಾರೋ ಎಂಬ ಮನೋಭಾವ ಬೇಡ. ನೀವು ಉತ್ತಮವಾಗಿ ಕೆಲಸ ಮಾಡಿದರೆ ನಮ್ಮಿಂದ ಎಲ್ಲಾ ರೀತಿಯ ಸಹಕಾರ ಇರಲಿದೆ ಎಂದು ಅಧಿಕಾರಿ ವೃಂದಕ್ಕೆ ಸಚಿವರು ಆಶ್ವಾಸನೆ ನೀಡಿದರು.
ಪ್ರಬಂಧ ಸ್ಪರ್ಧೆ:
ನಮ್ಮ ಕನಸಿನ ಕಲಬುರಗಿ ಕುರಿತಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ಮುಂದಿನ ಮೂರು ದಶಕದಲ್ಲಿ ಜಿಲ್ಲೆಯಲ್ಲಿ ಯಾವ ರೀತಿ ಇರಬೇಕು ಎಂಬುದನ್ನು ಸಲಹಾ ರೂಪದಲ್ಲಿ ಇರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು , ಶಿಕ್ಷಕರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕೈಗಾರಿಕೆ, ಕೃಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಜಿಲ್ಲೆ ಹೀಗಿರಬೇಕೆಂಬುದನ್ನು ಪ್ರಬಂಧದಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳಬಹುದೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಿದ್ಧಪಡಿಸಿದ ಪ್ರಬಂಧನವನ್ನು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಗ್ರಹಿಸಿಕೊಳ್ಳಬೇಕು. ಬಳಿಕ ಇದನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಡಿಡಿಪಿಐ)ರಿಗೆ ಸಲ್ಲಿಸಬೇಕು. ನಂತರ ಅವರು ಸಿಇಒಗಳಿಗೆ ಕಳುಹಿಸಬೇಕು. ಉತ್ತಮವಾಗಿ ಯಾರು ಬರೆದಿರುತ್ತಾರೋ ಅವರಿಗೆ ಬಹುಮಾನ ನೀಡುವುದಾಗಿ ಹೇಳಿದರು.