ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮಾನ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದು ಸಂಜೆ ಬೆಂಗಳೂರಿನ ರಾಜಭವನದಲ್ಲಿ, ಉಪ ರಾಷ್ಟ್ರಪತಿ ಘನತೆವೆತ್ತ ಎಂ. ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿದ್ದರು.
ಘನತೆವೆತ್ತ ಉಪ ರಾಷ್ಟ್ರಪತಿಯವರೊಂದಿಗಿನ ಈ ಭೇಟಿಯ ವೇಳೆ ಮಾನ್ಯ ಸ್ಪೀಕರ್ ಅವರು, ಕೆಲವೇ ಕೆಲವು ಸದಸ್ಯರ ಅನುಚಿತವಾಗಿ ವರ್ತನೆ, ಗದ್ದಲದಿಂದಾಗಿ ಸಂಸತ್ತಿನ ಅಥವಾ ವಿಧಾನ ಮಂಡಲದ ಕಾರ್ಯ ಕಲಾಪಕ್ಕೆ ಪದೇ ಪದೇ ಅಡ್ಡಿ ಆಗದ ರೀತಿಯಲ್ಲಿ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲವೇ ಕೆಲವು ಸದಸ್ಯರ ವರ್ತನೆಯಿಂದಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಯಸುವ ಇತರ ಸದಸ್ಯರ ಹಕ್ಕಿಗೆ ಚ್ಯುತಿಯಾಗುತ್ತಿದೆ ಮತ್ತು ಈ ಅನುಚಿತ ವರ್ತನೆ “ಪ್ರಜಾಪ್ರಭುತ್ವದ ದೇಗುಲ’’ಗಳಾದ ಸಂಸತ್ತು ಮತ್ತು ವಿಧಾನ ಮಂಡಳದ ಘನತೆಗೆ ಕುಂದುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
“ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಇನ್ನು ಮುಂದೆ ಸದನದ ಕಾರ್ಯ ಕಲಾಪಗಳಿಗೆ ಅಡ್ಡಿಪಡಿಸದಂತೆ ತಡೆಯುವ ಅಗತ್ಯವಿದೆ ಎಂದು ಸ್ಪೀಕರ್ ಅವರು ಉಪ ರಾಷ್ಟ್ರಪತಿಯವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಒಂದು ರಾಷ್ಟ್ರ, ಒಂದು ಚುನಾವಣೆ, ಭಾರತೀಯ ಸಂವಿಧಾನದ ಕುರಿತಂತೆ ಕರ್ನಾಟಕ ವಿಧಾನಸಭೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದನ್ನು ಘನತೆವೆತ್ತ ಉಪರಾಷ್ಟ್ರಪತಿಯವರಿಗೆ ತಿಳಿಸಿದ ಸ್ಪೀಕರ್ ಅವರು, ಪಕ್ಷಾಂತರದ ಪಿಡುಗಿನ ನಿರ್ಮೂಲನೆಗೆ ಸಂವಿಧಾನದ ಹತ್ತನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಅಗತ್ಯವನ್ನೂ ಪ್ರತಿಪಾದಿಸಿದರು.