ಬೆಳಗಾವಿ: ಕಾಗವಾಡ ಸಮೀಪದ ಪುರಾಣ ಪ್ರಸಿದ್ದ ಪದ್ಮಾವತಿ ದೇವಿಯ ಚಿನ್ನದ ಮೂರ್ತಿ ಪ್ರತಿಷ್ಠಾಪನಾ ಕೈಂಕರ್ಯ ನಾಡಿನ ಗಮನಸೆಳೆದಿದೆ. ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಪದ್ಮಾವತಿ ದೇವಿಯ ಚಿನ್ನದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಗವಾಡ ಸಮೀಪದ ಉಗಾರ ಗ್ರಾಮದಲ್ಲಿರುವ ಶ್ರೀ ಪದ್ಮಾವತಿ ದೇವಿಯು ಈ ಭಾಗದ ಭಕ್ತರ ಆರಾಧ್ಯ ದೈವವಾಗಿದ್ದು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದ ಸಾವಿರಾರು ಭಕ್ತರ ನಂಬಿಕೆಯ ದೇವತೆಯಾಗಿದೆ ಎಂದರು.
ಮೂಲತಃ ಮಹಾರಾಷ್ಟ್ರದ ಕಾಂಬೋಜ ಗ್ರಾಮದ ಪದ್ಮಾವತಿ, ಉಗಾರ ಗ್ರಾಮದಲ್ಲಿ ನೆಲೆಸಿ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ಈ ದೇವಿಯನ್ನು ನಂಬಿ ಆರಾಧಿಸಿದ ಭಕ್ತರ ಜೀವನದಲ್ಲಿ ಅಭ್ಯುದಯವಾಗಿದೆ ಎಂದು ಅವರು ಪುರಾಣ ಕಥೆಗಳನ್ನು ಉದಾಹರಿಸಿದರು.
ಸಮಾರಂಭದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.