ಬೆಂಗಳೂರು: ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಎಂ.ರಾಮಜೋಯಸ್ ಅವರು ವಿಧಿವಶರಾಗಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ರಾಮಾ ಜೋಯಿಸ್ ಅವರು ಸಂಘ ಪರಿವಾರ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸಂಘದ ಗರಡಿಯಲ್ಲಿ ಹಿರಿಯ ಚಿಂತಕಾರಾಗಿಯೂ ಗುರುತಾಗಿದ್ದರು.
ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ನಿಧನಕ್ಕೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿಯವರು ಕೂಡಾ ರಾಮಾ ಜೋಯಿಸ್ ನಿಧನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್ ಎಸ್‍ಎಸ್‍ನ ನಿಷ್ಠಾವಂತ ಕಾರ್ಯಕರ್ತರಾಗಿ ಬಿಜೆಪಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ಹಠಾತ್ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ನಿರಾಣಿ ಕಂಬನಿ ಮಿಡಿದಿದ್ದಾರೆ.
ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಹಾಗೂ ಸುಪ್ರೀಂಕೋರ್ಟ್‍ನಲ್ಲೂ ನ್ಯಾಯಮೂರ್ತಿಯಾಗಿದ್ದ ರಾಮಜೋಯಸ್ ಅವರು ದೇಶದ ಕೆಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ ಪ್ರಮುಖರಾಗಿದ್ದರು ಎಂದು ಬಣ್ಣಿಸಿದ್ದಾರೆ.
ಓರ್ವ ಶ್ರೇಷ್ಠ ಜ್ಞಾನಿಯೂ ಆಗಿದ್ದ ಅವರು ದೇಶದ ಹಾಗೂ ರಾಜ್ಯದ ಯಾವುದೇ ಸಮಸ್ಯೆಗಳು ಬಿಕ್ಕಟ್ಟು ಎದುರಾದಾಗ ಮುಂಚೂಣಿಯಲ್ಲಿ ನಿಂತು ಸಲಹೆಗಳನ್ನು ನೀಡುತ್ತಿದ್ದ ಮೇಧಾವಿಯಾಗಿದ್ದರು.
ಕಾನೂನು ತಜ್ಞ ರಾಗಿದ್ದ ಅವರು ರಚಿಸಿದ ಕೃತಿಗಳೂ ದೇಶದ ಕಾನೂನು ವ್ಯವಸ್ಥೆ, ಸಂವಿಧಾನದ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆ ವಾಸ ಅನುಭವಿಸಿದ್ದರು ಎಂದು ಸಚಿವ ಮುರುಗೇಶ ನಿರಾಣಿ ಸ್ಮರಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ಅವರು ಮಂಡಿಸುತ್ತಿದ್ದ ವಿಷಯ ಪಾಂಡಿತ್ಯ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಜೋಯಸ್ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಶೋಕ ವ್ಯಕ್ತಪಡಿಸಿದ್ದಾರೆ.